ಸಿಡ್ನಿ: ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯ ಮುಗಿದಿದ್ದು, ಅತಿಥೇಯ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ 95 ರನ್ ಗಳ ಅಂತರದ ಗೆಲುವು ಸಾಧಿಸಿ ಫೈನಲ್ ಗೇರಿದೆ.
ಆಸ್ಟ್ರೇಲಿಯಾ ನೀಡಿದ 329 ರನ್ ಗಳ ಬೃಹತ್ ಗುರಿಯನ್ನು ಮುಟ್ಟುವಲ್ಲಿ ಭಾರತ ತಂಡ ವಿಫಲವಾಗಿದ್ದು, ಕೇವಲ 233 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿದೆ. ಇನ್ನು ಹಲವು ಕುತೂಹಲಗಳಿಗೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಕ್ರಿಕೆಟ್ ತಜ್ಞರ ಭವಿಷ್ಯದಂತೆ ಆಸ್ಟ್ರೇಲಿಯಾ ತಂಡ ಭಾರತ ತಂಡವನ್ನು ಮಣಿಸಿ ಫೈನಲ್ ಗೇರಿದೆ. ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕಾಂಗರೂ ಪಡೆ ಸೆಣಸಲಿದೆ.
ಕೊಹ್ಲಿಗೆ ಲಕ್ಕಿಚಾರ್ಮ್ ಆಗಲಿಲ್ಲ ಅನುಷ್ಕಾ
ಇನ್ನು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯ ವೀಕ್ಷಣೆಗೆ ಬಾಲಿವುಡ್ ನಟಿ ಮತ್ತು ಕೊಹ್ಲಿ ಗೆಳತಿ ಅನುಷ್ಕಾ ಶರ್ಮಾ ಆಗಮಿಸಿದ್ದರು. ಈ ಹಿಂದಿನ ಪಂದ್ಯಗಳಂತೆಯೇ ವಿರಾಟ್ ಕೊಹ್ಲಿ ಅವರಿಗೆ ಅನುಷ್ಕಾ ಲಕ್ಕಿ ಚಾರ್ಮ್ ಆಗಲಿದ್ದಾರೆ ಎಂದು ಊಹಿಸಲಾಗಿತ್ತಾದರೂ, ಕೊಹ್ಲಿ ಅವರ ಅದೃಷ್ಟ ಪ್ರಮುಖ ಘಟ್ಟದಲ್ಲಿ ಕೈಕೊಟ್ಟಿತು. ಸೆಮಿಫೈನಲ್ ನಂತಹ ಪ್ರಮುಖ ಪಂದ್ಯದಲ್ಲಿ ಕೊಹ್ಲಿ ಕೇವಲ 1 ರನ್ ಗೆ ಔಟ್ ಆದರು. ಕೊಹ್ಲಿ ನಿರ್ಗಮನ ಕೇವಲ ಭಾರತದ ಕ್ರೀಡಾಭಿಮಾನಿಗಳಿಗೆ ಅಷ್ಟೇ ಅಲ್ಲದೆ ಸ್ವತಃ ಅನುಷ್ಕಾ ಶರ್ಮಾ ಅವರಿಗೂ ತೀವ್ರ ನಿರಾಸೆಯನ್ನುಂಟು ಮಾಡಿತ್ತು. ಅತ್ತ ಕೊಹ್ಲಿ ಪೆವಿಲಿಯನ್ ನತ್ತ ಮರಳುತ್ತಿದ್ದರೆ, ಇತ್ತ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಅನುಷ್ಕಾ ಶರ್ಮಾ ನಿರಾಸೆಯಿಂದ ತಲೆ ಮೇಲೆ ಕೈಹೊತ್ತು ನಿಂತಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು.
ಕೇವಲ 2 ರನ್ ಗಳ ಅಂತರದಲ್ಲಿ ಭಾರತ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಗಳನ್ನು ಕಳೆದುಕೊಂಡಿದ್ದು, ಭಾರತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅದರಲ್ಲಿಯೂ ಪ್ರಮುಖವಾಗಿ ಈ ಹಿಂದಿನ ಪಂದ್ಯಗಳಲ್ಲಿ ಉತ್ತಮವಾಗಿ ಆಡಿ ಉತ್ತಮ ಫಾರ್ಮ್ ನಲ್ಲಿದ್ದ ವಿರಾಟ್ ಕೊಹ್ಲಿ ಕೇವಲ 1 ರನ್ ಗೇ ಔಟ್ ಆಗಿದ್ದು, ಪಂದ್ಯದ ಗತಿಯನ್ನೇ ಬದಲಿಸಿತು ಎನ್ನಬಹುದು.
ನಿಜವಾದ ಗಾವಸ್ಕರ್ ಭವಿಷ್ಯ
ಇನ್ನು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸೆಮಿಫೈನಲ್ ಪಂದ್ಯದ ಕುರಿತಂತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಅವರು ಆಸ್ಟ್ರೇಲಿಯಾ ಸೆಮಿಫೈನಲ್ ಪಂದ್ಯ ಗೆಲ್ಲಬಹುದು ಎಂದು ಅಭಿಪ್ರಾಯಪಟ್ಟಿದ್ದರು. "ನನ್ನ ಮನಸ್ಸು ಭಾರತ ತಂಡ ಗೆಲ್ಲುತ್ತದೆ ಎಂದು ಹೇಳಿದರೂ ಕೂಡ ನನ್ನ ತಲೆ ಅದೇಕೋ ಆಸ್ಟ್ರೇಲಿಯಾದತ್ತ ವಾಲುತ್ತಿದೆ. ಆಸ್ಟ್ರೇಲಿಯಾ ತಂಡ ಸೆಮಿಫೈನಲ್ ಪಂದ್ಯ ಗೆಲ್ಲಬಹುದು" ಎಂದು ಗಾವಸ್ಕರ್ ನುಡಿದಿದ್ದ ಭವಿಷ್ಯ ಇದೀಗ ನಿಜವಾಗಿದೆ.
ಚಾಣಕ್ಯನ ಭವಿಷ್ಯವನ್ನು ಸುಳ್ಳಾಗಿಸಿದ ಆಸ್ಟ್ರೇಲಿಯಾ
ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಲಿದೆ ಎಂದು ಹೇಳಿದ್ದ ಚೈನ್ನೈನ ಚಾಣಕ್ಯ ಎಂಬ ಮೀನಿನ ಭವಿಷ್ಯವನ್ನು ಆಸ್ಟ್ರೇಲಿಯಾ ತಂಡದ ಆಟಗಾರರು ಸುಳ್ಳಾಗಿಸಿದ್ದಾರೆ. ಈ ಹಿಂದೆ ಅಕ್ವೇರಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಬಾವುಟವಿರುವ ದೋಣಿಯನ್ನು ಚಾಣಕ್ಯನಿಗೆ ಮುಟ್ಟಲುಬಿಟ್ಟಾಗ, ಎರಡು ಬಾರಿ ಭಾರತದ ಬಾವುಟವನ್ನು ಚಾಣಕ್ಯ ಮುಟ್ಟಿತ್ತು. ಹೀಗಾಗಿ ಸೆಮಿಫೈನಲ್ ಭಾರತ ತಂಡ ಗೆದ್ದೇಗೆಲ್ಲುತ್ತದೆ ಎಂದು ಅಭಿಮಾನಿಗಳು ಕುಣಿದುಕುಪ್ಪಳಿಸಿದ್ದರು. ಆದರೆ ಇದೀಗ ಚಾಣಕ್ಯನ ಭವಿಷ್ಯ ಸುಳ್ಳಾಗಿದೆ.