ಮುಂಬೈ: `ನನ್ನನ್ನು ಟೀಕಿಸುವವರಿಗೆ ನಾನು ಬ್ಯಾಟ್‍ನಿಂದಲೇ ಉತ್ತರಿಸುವೆ- ಇದು ಡೆಲ್ಲಿ ಡೇರ್ ಡೆವಿಲ್ಸ್ ಆಟಗಾರ ಯುವರಾಜ್ ಸಿಂಗ್ ಅವರ ಗುಡುಗು.
ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಯುವರಾಜ್ 57 ರನ್ ಸಿಡಿಸಿದ್ದರು. ಅವರ ಉತ್ತಮ ಪ್ರದರ್ಶನದಿಂದ ಡೆಲ್ಲಿ ತಂಡ, 20 ಓವರ್ ಗಳಲ್ಲಿ 152 ರನ್ ಮೊತ್ತ ಪೇರಿಸಲು ಸಾಧ್ಯವಾಯಿತು.
ಅರ್ಧಶತಕ ಸಿಡಿಸಿದ ರೋಷಾವೇಶದಲ್ಲೇ ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯುವಿ, ತಮ್ಮ ವಿರುದ್ಧ ಸೊಲ್ಲೆತ್ತಿದವರಿಗೆ ಹೀಗೆ ಮಾತಿನಲ್ಲಿ ಕುಟುಕಿದರು.
ಅವರು ಹಾಗೆ ಖಾರವಾಗಿ ಪ್ರತಿಕ್ರಿಯಿಸಲು ಕಾರಣವೂ ಇಲ್ಲದಿಲ್ಲ. ಇತ್ತೀಚೆಗೆ ಅವರ ಕಳಪೆ ಬ್ಯಾಟಿಂಗ್ ಹಲವರ ಬಾಯಿಗೆ ಆಹಾರವಾಗಿತ್ತು. ಈ ಹಿನ್ನೆಲೆಯಲ್ಲಿ, ಅವರು ಮಂಗಳವಾರ ಕೊಂಚ ಬಿರುನುಡಿಗಳನ್ನು ಉದುರಿಸಿದರು.
ನನ್ನ ಕೆಲಸ ಕೇಲವ ಕ್ರಿಕೆಟ್ ಆಡುವುದು. ಉತ್ತಮ ಆಟವಾಡಬೇಕೆನ್ನುವ ಗುರಿ ಹೊಂದಿರುತ್ತೇನೆ. ಟೀಕಾಕಾರರ ಕೆಲಸ ಮನಸ್ಸಿಗೆ ಬಂದಂತೆ ಬರೆಯುವುದು. ನಾವು ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅಸಲಿಗೆ ನಾನು ಅಂಥ ಬರಹಗಳನ್ನಾಗಲಿ, ಟಿವಿ ಕಾರ್ಯಕ್ರಮಗಳನ್ನಾಗಲಿ ನೋಡುವುದೇ ಇಲ್ಲ. ಅಷ್ಟು ಸಮಯವೂ ನನಗಿಲ್ಲ' ಎಂದರು.