ನವದೆಹಲಿ: ನಿಯಮ ಬಾಹಿರ ಬೌಲಿಂಗ್ ಶೈಲಿಯಿಂದ ತಂಡದಿಂದ ಹೊರಗುಳಿದಿದ್ದ ಕೋಲ್ಕೋತ್ತಾ ನೈಟ್ ರೈಡ್ ರೈಡರ್ಸ್ ತಂಡದ ಆಟಗಾರ ಸುನೀಲ್ ನಾರಾಯಣ ಅವರಿಗೆ ಬಿಸಿಸಿಐ ಈಗ ಮತ್ತೊಮ್ಮೆ ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ಹಾಲಿ ಚಾಂಪಿಯನ್ ಕೆಕೆಆರ್ ತಂಡಕ್ಕೆ ಹೊಸ ಉತ್ಸಾಹ ಬಂದಂತಾಗಿದೆ. ಆದರೆ ಮತ್ತೆ ಈ ರೀತಿಯಾದ ಬೌಲಿಂಗ್ ಮಾಡದಂತೆ ಬಿಸಿಸಿಐ ಸುನೀಲ್ ಗೆ ಎಚ್ಚರಿಕೆ ನೀಡಿದೆ.
ಕಳೆದ ವರ್ಷ ಚಾಂಪಿಯನ್ಸ್ ಲೀಗ್ ಟಿ-20 ಟೂರ್ನಿಯಲ್ಲಿ ಅನುಮಾನಾಸ್ಪದ ಬೌಲಿಂಗ್ ಶೈಲಿಯಿಂದಾಗಿ ಅಮಾನತುಗೊಂಡಿದ್ದ ವೆಸ್ಟ್ ಇಂಡೀಸ್ ಆಟಗಾರ ಸುನೀಲ್ ನಾರಾಯಣ್, ಈ ಭಾರಿಯ ಐಪಿಎಲ್ ಗೂ ಮುನ್ನ ಚೆನ್ನೈ ನಲ್ಲಿ ಬೌಲಿಂಗ್ ಪರೀಕ್ಷೆಗೆ ಒಳಗಾಗಿ ಮತ್ತೆ ಕಣಕ್ಕಿಳಿದಿದ್ದರು. ಆದರೆ ಏಪ್ರಿಲ್ 28 ರಂದು ಪುನಃ ಅನುಮಾನಾಸ್ಪದ ಬೌಲಿಂಗ್ ಶೈಲಿ ಆರೋಪ ಎದುರಿಸಿದರು. ಸುನೀಲ್ ಅವರ ಆಫ್ ಸ್ಪಿನ್ ಎಸೆತದಲ್ಲಿ ಲೋಪವಿರುವ ಹಿನ್ನೆಲೆಯಲ್ಲಿ ಅವರು ಮತ್ತೆ ಆ ಎಸೆತ ಪ್ರಯೋಗಿಸದಂತೆ ತಿಳಿಸಿತ್ತು. ಈಗ ಸುನೀಲ್ ನಾರಾಯಣ್ ಅವರಿಗೆ ಕಡೆಯ ಎಚ್ಚರಿಕೆ ನೀಡಿದ್ದು, ನಿಯಮ ಬಾಹಿರ ಬೌಲಿಂಗ್ ಮಾಡದಂತೆ ಸೂಚನೆ ನೀಡಿದೆ. ಇದೇ ವೇಳೆ ಸುನೀಲ್ ನಾರಾಯಣ್ ಬಿಸಿಸಿಐ ಅನುಮಾನಾಸ್ಪದ ಬೌಲಿಂಗ್ ಶೈಲಿ ಪರಿಶೀಲಿಸಲು ಮನವಿ ಸಲ್ಲಿಸಿದ್ದರು. ಅವರ ಕೋರಿಕೆಯಂತೆ ಚೆನ್ನೈನಲ್ಲಿರುವ ಶ್ರೀರಾಮಚಂದ್ರ ಆರ್ಥೋಸ್ಕೋಪಿ ಮತ್ತು ಸ್ಪೋರ್ಟ್ಸ್ ಸೈನ್ಸ್ ಕೇಂದ್ರದಲ್ಲಿ ಸುನೀಲ್ ಪರಿಷ್ಕೃತ ಬೌಲಿಂಗ್ ಶೈಲಿಯನ್ನು ಪರಿಕ್ಷಿಸಲಾಯಿತು ಎಂದು ಬಿಸಿಸಿಐ ತಿಳಿಸಿದೆ.