ಚೆನ್ನೈ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಆಂಬಟಿ ರಾಯುಡು ಹಾಗೂ ಹಾರ್ದಿಕ್ ಪಾಂಡ್ಯ ಅವರ ವೀರೋಚಿತ ಹೋರಾಟದ ನೆರವಿನಿಂದ ಮುಂಬೈಇಂಡಿಯನ್ಸ್ ತಂಡ, ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್‍ಗಳಿಂದ ಸೋಲಿಸಿತು. ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ 20 ಓವರ್‍ಗಳಲ್ಲಿ 5 ವಿಕೆಟ್‍ಗಳನ್ನು ಕಳೆದುಕೊಂಡು 158 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡ 19.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಗೆಲವಿನ ನಗೆ ಬೀರಿತು.
ವೀರೋಚಿತ ಹೋರಾಟ: ಚೆನ್ನೈ ನೀಡಿದ್ದ ಸ್ಪರ್ಧಾತ್ಮಕ ಮೊತ್ತವನ್ನು ಮೆಟ್ಟಲು ಕ್ರೀಸ್‍ಗೆ
ಇಳಿಸಿದ್ದ ಮುಂಬೈ ತಂಡದ ಪರ ಆರಂಭಿಕರಾದ ಸಿಮನ್ಸ್ ಹಾಗೂ ಪಾರ್ಥಿವ್ ಪಟೇಲ್ ಉತ್ತಮ ಆರಂಭ ನೀಡಿದರು. 10.1 ಓವರ್ ಗಳಲ್ಲಿ ಈ ಜೋಡಿ 84 ರನ್ ಪೇರಿಸಿ, ಇನಿಂಗ್ಸ್ ಗೆ ಉತ್ತಮ ಅಡಿಪಾಯ ಹಾಕಿತು. ಆದರೆ, 11ನೇ ಓವರ್‍ನಲ್ಲಿ ಈ ಇಬ್ಬರೂ ಪೆವಿಲಿಯನ್‍ಗೆ ಮರಳಿದಾಗ ಮುಂಬೈ ತಂಡದ ಪಾಳಯದಲ್ಲಿ ಆತಂಕ ಸೃಷ್ಟಿಸಿತು. ಆಗ, ಮುಂಬೈ ತಂಡ ಗೆಲವಿಗಾಗಿ 17 ಎಸೆತಗಳಿಂದ 34 ರನ್ ಪೇರಿಸಬೇಕಿತ್ತು. ಅದೇ ವೇಳೆ, ರೋಹಿತ್ ಶರ್ಮಾ ಪೋಲಾರ್ಡ್ ಸಹ ಬೇಗನೇ ವಿಕೆಟ್ ಚೆಲ್ಲಿದ್ದು ಮತ್ತಷ್ಟು ಆತಂಕ ಸೃಷ್ಟಿಸಿತು. ಆಗ, ಜೊತೆಯಾದ ಆಂಬಟಿ ರಾಯುಡು (34 ರನ್, 19 ಎಸೆತ, 1 ಸಿಕ್ಸರ್, 3 ಸಿಕ್ಸರ್)
ಹಾಗೂ ಹಾರ್ದಿಕ್ ಪಾಂಡ್ಯ (21 ರನ್, 8 ಎಸೆತ, 3 ಸಿಕ್ಸರ್ )ಸೇರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 19ನೇ ಓವರ್ ನಲ್ಲಿ ಮೂರು ಸಿಕ್ಸರ್ ಎತ್ತಿದ ಪಾಂಡ್ಯ ಪಂದ್ಯವನ್ನು ಮುಂಬೈ ತೆಕ್ಕೆಗೆ ಬರುವಂತೆ ಮಾಡಿದರು.ಚೆನ್ನೈ ಸ್ಪರ್ಧಾತ್ಮಕ ಮೊತ್ತ: ಇದಕ್ಕೂ ಮೊದಲು
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡ್ವೈನ್ ಸ್ಮಿತ್ ಹಾಗೂ ಬ್ರೆಂಡಾನ್ ಮೆಕಲಂ ಜೋಡಿಯ ನೆರವಿನಿಂದ ಉತ್ತಮ ಆರಂಭ ಪಡೆಯಿತು. 4.4 ಓವರ್‍ಗಳಲ್ಲಿ ಈ ಜೋಡಿ ಮೊದಲ ವಿಕೆಟ್ ಗೆ 44 ರನ್ ಸೇರಿಸಿ ಇನಿಂಗ್ಸ್ ಗೆ ಶುಭಾರಂಭ ನೀಡಿದರು. ಆದರೆ ಕನ್ನಡಿಗ ವಿನಯ್ ಕುಮಾರ್ ಅವರು, ಮೆಕಲಂ ವಿಕೆಟ್ ಕೆಡವುವ ಮೂಲಕ
ಈ ಜೋಡಿಯನ್ನು ಮುರಿದರು. ಆರಂಭಿಕರ ಜೋಡಿ ಮುರಿದ ಮೇಲೆ, ಕ್ರೀಸ್‍ಗೆ ಕಾಲಿಟ್ಟ ಆಕ್ರಮಣಕಾರಿ ಬ್ಯಾಟ್ಸ್ ಮನ್ ಸುರೇಶ್ ರೈನಾ ನಿರಾಸೆ ಮೂಡಿಸಿ ಹೊರನಡೆದರು. ಅವರ ಹಿಂದೆಯೇ ಆರಂಭಿಕ ಡ್ವೈನ್ ಸ್ಮಿತ್ ಸಹ ವಿಕೆಟ್ ಒಪ್ಪಿಸಿದರು. ಅವರ ನಂತರ ಬಂದ ಡು ಪ್ಲೆಸಿಸ್ ಇಬ್ಬರೂ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಈ ಹಂತದಲ್ಲಿ ಜೊತೆಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಪವನ್ ನೇಗಿ, 5ನೇ ವಿಕೆಟ್ ಗೆ ಉತ್ತಮ ಜೊತೆಯಾಟವಾಡಿ ತಂಡದ ಮೊತ್ತ 150 ರನ್ ಗಡಿ ದಾಟುವಂತೆ ನೋಡಿಕೊಂಡರು.
ಇನ್ನಿಂಗ್ಸ್ ನ ಕೊನೆಯ ಎಸೆತದಲ್ಲಿ ನೇಗಿ( 36 ರನ್, 17 ಎಸೆತ, 4 ಸಿಕ್ಸರ್) ರನೌಟ್ ಆದರು. ನಾಯಕ ಧೋನಿ (39 ರನ್, 32 ಎಸೆತ, 2 ಬೌಂಡರಿ, 2 ಸಿಕ್ಸರ್ ) ಕೊನೆಯವರೆಗೂ ಅಜೇಯರಾಗುಳಿದರು.