ಕ್ರೀಡೆ

ನೋವಾಕ್, ಸೆರೆನಾ ವಿಲಿಯಮ್ ನಂ.1

Shilpa D

ಪ್ಯಾರಿಸ್: ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬ್ರಿಟನ್‍ನ ಆಂಡಿ ಮರ್ರೆ ವಿರುದ್ಧ ಸೋಲನುಭವಿಸಿದ ರಾಫೆಲ್ ನಡಾಲ್ ನೂತನ ಎಟಿಪಿ ರ್ಯಾಂಕಿಂಗ್ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಕಳೆದ 10 ವರ್ಷಗಳಲ್ಲಿ ರಾಫೆಲ್ ನಡಾಲ್‍ಗೆ ಇದು ಅತ್ಯಂತ ದೊಡ್ಡ ಕುಸಿತವಾಗಿದೆ. ಇನ್ನು ಮ್ಯಾಂಡ್ರಿಡ್ ಓಪನ್ ಟೂರ್ನಿಯಿಂದ ಹಿಂದೆಸರಿದಿದ್ದ ಸರ್ಬಿಯಾದ ನೊವಾಕ್ ಜೊಕೊವಿಚ್ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ. ನೊವಾಕ್ ಜೊಕೊವಿಚ್ 13,845 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ನಡಾಲ್ 4,990 ಅಂಕ ಪಡೆದು ಕುಸಿತ ಕಂಡಿದ್ದಾರೆ. ರಾಫೆಲ್ ವಿರುದ್ಧ 6-3, 6-2 ಸೆಟ್‍ಗಳ ಅಂತರದಲ್ಲಿ ಸುಲಭ ಜಯ ದಾಖಲಿಸಿದ ಮರ್ರೆ, 7,130 ಅಂಕಗಳನ್ನು ಪಡೆದು 3ನೇ ಸ್ಥಾನಕ್ಕೇರಿದ್ದಾರೆ. ಕಳೆದ ಮೂರು ವಾರಗಳ ಅಂತರದಲ್ಲಿ ಮ್ಯೂನಿಚ್ ಹಾಗೂ ಮ್ಯಾಂಡ್ರಿಡ್ ಟೂರ್ನಿಗಳನ್ನು ಗೆದ್ದುಕೊಂಡಿರುವ ಮರ್ರೆ, ಸತತ ಎರಡು ಕ್ಲೇ ಜಯಿಸಿದಂತಾಗಿದೆ. ಟೂರ್ನಿಯ ಎರಡನೇ ಸುತ್ತಿನಲ್ಲಿ ಹೊರಬಿದ್ದ ಸ್ವಿಜರ್ಲೆಂಡ್ ಆಟಗಾರ ರೋಜರ್ ಫೆಡರರ್, 8,645 ಪಾಯಿಂಟ್ ಹೊಂದಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಮರ್ರೆ ಮುಂದಿನ ದಿನಗಳಲ್ಲೂ ಇದೇ ರೀತಿಯ ಪ್ರದರ್ಶನ ನೀಡಿದರೆ, ಫೆಡರರ್ ಸ್ಥಾನವನ್ನು ತುಂಬುವ ಅವಕಾಶ ಹೊಂದಿದ್ದಾರೆ. ಮ್ಯಾಂಡ್ರಿಡ್ ಟೂರ್ನಿಯ ಕ್ವಾರ್ಟರ್ ಫೈನಲ್‍ವರೆಗೆ ತಲುಪಿದ್ದ ಮಿಲೊಸ್ ನಿಕ್ (5,160) ಮತ್ತು ಸೆಮಿಫೈನಲ್ ಪ್ರವೇಶಿಸಿದ್ದ ಥಾಮಸ್ ಬೆರ್ಡಿಚ್ (5,140) ಎರಡು ಸ್ಥಾನಗಳ ಬಡ್ತಿ ಪಡೆದು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಇನ್ನು ಸೆಮಿಫೈನಲ್ ಪ್ರವೇಶಿಸಿದ್ದ ಜಪಾನ್ ಆಟಗಾರ ಕೀ ನಿಶಿಕೋರಿ, 5,040 ಅಂಕಗಳಿಂದ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಸೆರೆನಾ ಪ್ರಾಬಲ್ಯ: ಡಬ್ಲ್ಯುಟಿಎ ರ್ಯಾಂಕಿಂಗ್ ಪಟ್ಟಿಯ ಮಹಿಳೆಯರ ಸಿಂಗಲ್ಸ್ ನಲ್ಲಿ  ಅಮೆರಿಕಾದ ಆಟಗಾರ್ತಿ ಸೆರೆನಾ ವಿಲಿಯಮ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. 10,156 ಅಂಕಗಳನ್ನು ಸಂಪಾದಿಸಿರುವ ಸೆರೆನಾ ವಿಲಿಯಮ್ ಮೊದಲ ಸ್ಥಾನದಲ್ಲಿದ್ದಾರೆ. ಸಿಮೊನಾ ಹಾಲೆಪ್ 7,115 ಅಂಕ ಗಳಿಸಿ ದ್ವಿತೀಯ ಹಾಗೂ 6,915 ಅಂಕ ಪಡೆದಿರುವ ರಷ್ಯಾದ ಮಾರಿಯಾ ಶರಪೋವಾ ತೃತೀಯ ಸ್ಥಾನದಲ್ಲಿದ್ದಾರೆ. ಮ್ಯಾಂಡ್ರಿಡ್ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಪೆಟ್ರಾ ಕ್ವಿಟೋವಾ 6,670 ನಾಲ್ಕನೇ ಸ್ಥಾನದಲ್ಲಿದ್ದಾರೆ.

SCROLL FOR NEXT