ಕ್ರೀಡೆ

ಬೆಂಗಳೂರು 10ಕೆ ನಕ್ಷೆ ಬಿಡುಗಡೆ

Shilpa D

ಬೆಂಗಳೂರು: ನಗರದ ಪ್ರತಿಷ್ಠಿತ ಓಟವೆಂದೆ ಬಿಂಬಿತವಾಗಿರುವ ಟಿಸಿಎಸ್ ವಿಶ್ವ 10ಕೆ ಬೆಂಗಳೂರು ಓಟದ ನಕ್ಷೆಯನ್ನು ಬುಧವಾರ ಬಿಡುಗಡೆ ಮಾಡಲಾಯಿತು.
ಕಂಠೀರವ ಕ್ರೀಡಾಂಗಣದಿಂದ ಆರಂಭವಾಗಿ ನಂತರ ಕಸ್ತೂರಿ ಬಾ ರಸ್ತೆ ನಂತರ, ಅನಿಲ್ ಕುಂಬ್ಳೆ ವೃತ್ತದಲ್ಲಿ ತಿರುವು ಪಡೆದು ರಾಜಭವನ ರಸ್ತೆಯಲ್ಲಿ ಸಾಗಬೇಕು.  ನಂತರ ಮಣಿಪಾಲ್ ಟವರ್ ವರೆಗೂ ಸಾಗಿ ಅದೇ ರಸ್ತೆಯಲ್ಲಿ ಮರಳಿ ಮಹಾತ್ಮ ಗಾಂಧಿ ವೃತ್ತದಿಂದ ಪೊಲೀಸ್ ತಿಮ್ಮಯ್ಯ ವೃತ್ತದ ಕಡೆಗೆ ಸಾಗಿ, ವಿಧಾನ ಸೌಧ ರಸ್ತೆ ಮೂಲಕ ತೆರಳಬೇಕು. ನಂತರ, ಕಬ್ಬನ್ ಪಾರ್ಕ್ ಒಳಗೆ ಸಾಗಿ ಸೆಂಟ್ರಲ್ ಲೈಬ್ರರಿ ಮಾರ್ಗವಾಗಿ ಕಾರ್ಪೋರೇಷನ್ ವೃತ್ತದಿಂದ ಕಸ್ತೂರಿ ಬಾ ರಸ್ತೆಯಲ್ಲಿ ಕಂಠೀರವ ಕ್ರೀಡಾಂಗಣ ಮುಟ್ಟಬೇಕು.
ಭಾನುವಾರ ನಡೆಯಲಿರುವ ಈ ಓಟದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಬೆಳಗ್ಗೆ 6 ಗಂಟೆಗೆ ಈ ಓಟಕ್ಕೆ ಚಾಲನೆ ಸಿಗಲಿದೆ. ಪುರುಷರ 10 ಕೆ ಓಟ ಬೆಳಗ್ಗೆ 7.25 ಕ್ಕೆ ಆರಂಭವಾಗಲಿದ್ದು,  7.40ಕ್ಕೆ ಹಿರಿಯ ನಾಗರಿಕರ 4.3 ಕಿ.ಮೀ ಓಟ ಆರಂಭವಾಗುತ್ತದೆ. ನಂತರ ಮಹಿಳೆಯರ 10ಕೆ ಓಟ ಆರಂಭವಾಗಲಿದ್ದು, ಡಿಎಚ್ ಎಲ್ ಚಾಂಪಿಯನ್ಸ್  ಆಫ್ ಚಾಂಪಿಯನ್ ಮತ್ತು ವಿಕಲ ಚೇತನರ ಓಟ ಕ್ರಮವಾಗಿ 8.20 ಹಾಗೂ 8.25ಕ್ಕೆ ಆರಂಭವಾಗಲಿದೆ. ಅಂತಿಮವಾಗಿ ಬಹುನಿರೀಕ್ಷಿತ ಮಜ್ಜಾ ರನ್ 9 ಗಂಟೆಗೆ ಆರಂಭವಾಗಲಿದ್ದು, ಈ ವಿಭಾಗದಲ್ಲಿ 11 ಸಾವಿರ ಸ್ಪರ್ಧಿಗಳು ಓಡಲಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ್ದ  ಹೆಚ್ಚುವರಿ ಸಂಚಾರಿ ಪೊಲೀಸ್ ಆಯುಕ್ತರಾದ ಡಾ.ಎಂ.ಎ ಸಲೀಮ್ , ಓಟವನ್ನು ಯಶಸ್ವಿಯಾಗಿಸಲು ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು,  ಟ್ರಾಫಿಕ್ ಬಗೆಗಿನ ಮಾಹಿತಿಯನ್ನು ಶೀಘ್ರವೇ ತಿಳಿಸಲಾಗುವುದು  ಎಂದರು.
ಜೆರ್ಸಿ ಬಿಡುಗಡೆ: ಬೆಂಗಳೂರು 10ಕೆ ಓಟದ ಜೆರ್ಸಿಯನ್ನು ಬುಧವಾರ ಕಂಠೀರವ ಕ್ರೀಡಾಂಗಣದಲ್ಲಿ ಬಿಡುಗಡೆ ಮಾಡಲಾಯಿತು. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಫುಟ್ಬಾಲ್ ತಂಡದ ಆಟಗಾರ  ಹಾಗೂ ಬಿಎಫ್ ಸಿ ನಾಯಕ ಸುನೀಲ್ ಛೆಟ್ರಿ ರೇಸ್ ಫೀನಿಷರ್ ಜೆರ್ಸಿ ಬಿಡುಗಡೆ ಮಾಡಿದರು.  ಭಾನುವಾರ ನಡೆಯಲಿರುವ ಓಟವನ್ನು ಪೂರ್ಣಗೊಳಿಸುವ  1000 ಸ್ಪರ್ಧಿಗಳು ಈ ಜೆರ್ಸಿಯನ್ನು ಪಡೆಯಲಿದ್ದಾರೆ.







SCROLL FOR NEXT