ಮುಂಬೈ: ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ 8ನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ಲೇ-ಆಫ್ ಸುತ್ತಿನ ಆಸೆ ಜೀವಂತವಾಗಿರಿಸಿಕೊಳ್ಳಲಿದೆಯೇ? ಅಥವಾ, ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಎದುರು ತಲೆಬಾಗಿಸಿ ಈ ಅವಕಾಶವನ್ನು ಬಹುತೇಕ ಕಳೆದುಕೊಳ್ಳಲಿದೆಯೇ ಎಂಬುದು ಈಗ ಚರ್ಚೆಯಾಗುತ್ತಿರುವ ವಿಷಯ.
ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ
ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದರೆ ಮಾತ್ರ ಮುಂದಿನ ಸುತ್ತಿನ ಆಸೆ ಕಾಣಬಹುದು. ಸೋಲನುಭವಿಸಿದರೆ, ಪ್ಲೇ-ಆಫ್ ಸುತ್ತಿನ ಪೈಪೋಟಿಯಿಂದ ಹೊರನಡೆಯುವುದು ಬಹುತೇಕ
ಖಚಿತವಾದಂತೆಯೇ ಈಗಾಗಲೇ ಮೊದಲ ಸುತ್ತಿನ ಸಮರದಲ್ಲಿ ಮುಂಬೈ ಇಂಡಿಯನ್ಸ್ ಪಡೆ, ಕೋಲ್ಕತಾ ನೈಟ್ ರೈಡರ್ಸ್ ಎದುರು ಸೋಲೊಪ್ಪಿಕೊಂಡಿದೆ. ಈಡನ್ ಗಾರ್ಡನ್
ಮೈದಾನದಲ್ಲಿ ನಡೆದಿದ್ದ ಈ ಆವೃತ್ತಿಯ ಉದ್ಘಾಟನೆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಮುಂಬೈ 3 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತ್ತು.
ಉತ್ತರವಾಗಿ ಕೆಕೆಆರ್ ಇನ್ನೂ 9 ಎಸೆತಗಳು ಇರುವಂತೆಯೇ 3 ವಿಕೆಟ್ ಒಪ್ಪಿಸಿ 7 ವಿಕೆಟ್‍ಗಳಿಂದ ಸುಲಭ ಜಯ ದಾಖಲಿಸಿತ್ತು. ಈ ಸೋಲಿಗೆ ತಕ್ಕ ಸೇಡು ತೀರಿಸಿಕೊಳ್ಳುವುದರ ಜೊತೆಗೆ, ಪ್ಲೇ-ಆಫ್ ಸುತ್ತಿನ ಆಸೆಯನ್ನೂ ಜೀವಂತವಾಗಿರಿಸಿಕೊಳ್ಳಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಂಬೈ ಆಟಗಾರರಿದ್ದಾರೆ. ಹಾಗಾಗಿ, ಕೋಲ್ಕತಾ ವಿರುದ್ಧದ ಪಂದ್ಯ ಮುಂಬೈ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಅವಮಾನಕಾರಿ ರೀತಿಯಲ್ಲಿ ಸೋಲು ಕಂಡಿದ್ದ ಮುಂಬೈ ಇಂಡಿಯನ್ಸ್ ಒಂದು ರೀತಿಯಲ್ಲಿ ಮಾನಸಿಕ
ಆಘಾತ ಅನುಭವಿಸಿತು. ಮುಂಬೈ ದಾಳಿಯನ್ನು ಮನಬಂದಂತೆ ಪುಡಿಗಟ್ಟಿದ್ದ ಎಬಿ ಡಿವಿಲಿಯರ್ಸ್ ಹಾಗೂ ಇವರೊಂದಿಗೆ ದಾಖಲೆಯ ಜೊತೆಯಾಟ ನಿಭಾಯಿಸಿದ ವಿರಾಟ್
ಕೊಹ್ಲಿ ಹೊಡೆತಗಳು ಮುಂಬೈ ಆಟಗಾರರಿಗೆ ದೊಡ್ಡ ಪೆಟ್ಟು ನೀಡಿದ್ದವು.
ಈ ಪಂದ್ಯದಲ್ಲಿ ಬೆಂಗಳೂರು 235 ರನ್‍ಗಳ ಬೃಹತ್ ಮೊತ್ತ ಪೇರಿಸಿತ್ತು. ಆರಂಭದಲ್ಲಿ ಸತತ ಸೋಲುಗಳನ್ನು ಅನುಭವಿಸುತ್ತ, ತೀರ ತೊಂದರೆಗೆ ಸಿಲುಕಿದ್ದ ರೋಹಿತ್ ಶರ್ಮಾ ನೇತೃತ್ವದ ಮುಂಬೈ, ನಂತರ ಸತತ ಐದು ಪಂದ್ಯಗಳನ್ನು ಗೆದ್ದು ಮಾನ ಉಳಿಸಿಕೊಂಡಿತು. ಆ ಮೂಲಕ
ಮುಂದಿನ ಸುತ್ತು ಪ್ರವೇಶಿಸುವ ಕನಸು ಕಟ್ಟಿಕೊಂಡಿತು. ಆದರೆ, ಆರ್‍ಸಿಬಿ ವಿರುದ್ಧ ತವರಿನಲ್ಲೇ ಸೋತದ್ದು, ಪುನಃ ಮುಂಬೈ ಪಡೆಯನ್ನು ಸಂಕಷ್ಟಕ್ಕೆ ನೂಕಿದಂತಾಗಿದೆ.
ಈಗ ಮತ್ತೆ ತನ್ನ ನೆಲದಲ್ಲಿಯೇ ಕೋಲ್ಕತಾ ವಿರುದ್ಧ ಸೆಣಸಲು ಮುಂಬೈ ಆಟಗಾರರು ಸಜ್ಜಾಗಿದ್ದಾರೆ.12 ಪಂದ್ಯಗಳಿಂದ 12 ಅಂಕಗಳ ಸಂಪಾದನೆಯಲ್ಲಿರುವ ತಂಡ, ಕೊನೆಯ ಎರಡೂ ಪಂದ್ಯಗಳಲ್ಲಿ ಗೆಲವು ದಾಖಲಿಸುವುದು ಅನಿವಾರ್ಯವಾಗಿದೆ. ತಂಡವನ್ನು ಉತ್ತಮ ಹೋರಾಟದ ಹಾದಿಯ ಮೇಲೆ ಕರೆತರಲು ಸಾಕಷ್ಟು ಪ್ರಯೋಗಗಳನ್ನು ಮಾಡಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಫಲ ಪಡೆಯಲಾಗಿಲ್ಲ. ಹಾಗಾಗಿ, ಕೋಲ್ಕತಾ ವಿರುದ್ದ ಏನೇ ಪ್ರಯೋಗಕ್ಕೆ ಮುಂದಾದರೂ, ಮೊದಲಿಗೆ ಅದು ಸಫಲತೆ ತಂದುಕೊಡಬಲ್ಲದೇ ಎಂಬ ಬಗ್ಗೆ ಹೆಚ್ಚು ಚಿಂತನೆ ಅಗತ್ಯ. ಪ್ರಮುಖವಾಗಿ ತಂಡದ ದಿಗ್ಗಜರಾದ ರೋಹಿತ್, ಪೊಲಾರ್ಡ್, ರಾಯುಡು, ಸಿಮನ್ಸ್, ಹರ್ಭಜನ್, ಮಾಲಿಂಗ ತಮ್ಮ ವಿಭಾಗಗಳಲ್ಲಿ ಹೆಚ್ಚಿನ ಜವಾಬ್ದಾರಿ ಹೊರಬೇಕಾಗಿದೆ.
ಮತ್ತೊಂದೆಡೆ ಕೋಲ್ಕತಾ ನೈಟ್ ರೈಡರ್ಸ್ ಪ್ಲೇ-ಆಫ್ ಹೊಸ್ತಿಲಲ್ಲಿ ನಿಂತಿದೆ. ಇನ್ನೂ ಎರಡು ಪಂದ್ಯಗಳನ್ನು ಆಡಬೇಕಿದ್ದು, ಒಂದರಲ್ಲಿ ಗೆದ್ದರೂ ಮುನ್ನಡೆಯುವುದು ಬಹುತೇಕ ಖಚಿತ. ಸದ್ಯ ಕೆಕೆಆರ್ 12 ಪಂದ್ಯಗಳನ್ನಾಡಿದ್ದು, 7 ಜಯ ಮತ್ತು 4 ಸೋಲುಗಳೊಂದಿಗೆ 15 ಅಂಕಗಳಿಸಿದೆ. ಒಂದು ಪಂದ್ಯ ಮಳೆಗೆ ಆಹುತಿಯಾಗಿದೆ. ಗೌತಮ್ ಗಂಭೀರ್ ನಾಯಕತ್ವದ ಕೆಕೆಆರ್, ತನ್ನ ಕಳೆದ ಹೋರಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಅಭೂತಪೂರ್ವ ಗೆಲವು ದಾಖಲಿಸಿ ಬೀಗಿತ್ತು. ಗಂಬಿsೀರ್ ಹೊರತಾಗಿ, ಉತ್ತಪ್ಪ, ರಸೆಲ್, ಯೂಸುಫ್, ಪಾಂಡೆ,
ಸೂರ್ಯಕುಮಾರ್, ಉಮೇಶ್ ಯಾದವ್, ಬ್ರಾಡ್ ಹಾಗ್, ಕಮಿನ್ಸ್ ಕೋಲ್ಕತಾ ನೈಟ್ ರೈಡರ್ಸ್ ಪಾಲಿನ ಪ್ರಮುಖರೆನಿಸಿದ್ದಾರೆ.
ಒಂದು ವೇಳೆ ಕೋಲ್ಕತಾ, ಈ ಪಂದ್ಯವನ್ನು ಸೋತರೂ ಮತ್ತೊಂದು ಅವಕಾಶ ಇದ್ದೇ ಇದೆ. ಆದರೆ, ಮುಂಬೈ ಇಂಡಿಯನ್ಸ್ ಗೆ ಈ ಭಾಗ್ಯ ಇಲ್ಲ. ಗೆದ್ದು ಕನಸು ಕಾಣಬೇಕೇ ಹೊರತು, ಸೋತರೆ ಗಂಟುಮೂಟೆ ಕಟ್ಟಿಡಬೇಕಾಗುತ್ತದೆ. ಮುಖ್ಯವಾಗಿ ತಮ್ಮ ಕಳಪೆ ಕ್ಷೇತ್ರರಕ್ಷಣೆಯಿಂದ ಮುಂಬೈ ಆಟಗಾರರು ಹೊರಬರಬೇಕು. ಈ ವಿಭಾಗದಲ್ಲಿ ಸಾಕಷ್ಟು ಸುಧಾರಿಸಿಕೊಳ್ಳಬೇಕಾಗಿದೆ. ಕೆಟ್ಟ ಫೀಲ್ಡಿಂಗ್ ನಿಂದಾಗಿಯೇ ಕೆಲ ಪಂದ್ಯಗಳನ್ನು ಕೈಚೆಲ್ಲಿದ ಉದಾಹರಣೆಗಳಿವೆ.