ಕ್ರೀಡೆ

ದ್ರಾವಿಡ್ ಸ್ಥಾನ ತುಂಬುವುದು ಅಸಾಧ್ಯ: ಅಜಿಂಕ್ಯ ರಹಾನೆ

Vishwanath S

ಮುಂಬೈ: ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಆಧಾರ ಸ್ತಂಭವಾಗಿರುವ ಅಜಿಂಕ್ಯ ರಹಾನೆ ತಮ್ಮ ಮಾರ್ಗದರ್ಶಕ ರಾಹುಲ್ ದ್ರಾವಿಡ್ ಅವರಿಗೆ ಧನ್ಯವಾದ ಅರ್ಪಿಸಿದ್ದು, ಕ್ರಿಕೆಟ್‍ನಲ್ಲಿ ರಾಹುಲ್ ದ್ರಾವಿಡ್ ಮಾತ್ರ ಏಕೈಕ ಗೋಡೆಯಾಗಿದ್ದಾರೆ. ಅವರ ಜತೆ ಹೋಲಿಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಭಾರತ ಟೆಸ್ಟ್ ತಂಡದಲ್ಲಿ ರಹಾನೆ ಅವರ ಪ್ರದರ್ಶನವನ್ನು ಮೆಚ್ಚಿದ್ದ ರಾಹುಲ್ ದ್ರಾವಿಡ್, ರಹಾನೆ ಭಾರತ ತಂಡದ ಇತ್ತೀಚಿನ ಎಲ್ಲ ವಿದೇಶಿ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ ಏಕೈಕ ಆಟಗಾರ. ಬೇರೆ ಆಟಗಾರರು ಒಂದೆರಡು ಸರಣಿಯಲ್ಲಿ ಆಡಿದರೆ, ರಹಾನೆ ಎಲ್ಲ ಸರಣಿಯಲ್ಲೂ ಸ್ಥಿರ ಪ್ರದರ್ಶನ ನೀಡಿದ್ದರು ಎಂದು ತಿಳಿಸಿದರು.

ರಾಹುಲ್ ದ್ರಾವಿಡ್ ಅವರಿಂದ ಮೆಚ್ಚುಗೆಯ ಮಾತುಗಳು ಕೇಳಿರುವುದು ದೊಡ್ಡ ಸಂಗತಿ, ಈ ಮಾತು ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಫೂರ್ತಿ ನೀಡಲಿದೆ. ಕ್ರಿಕೆಟರ್ ಆಗಿ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣಬೇಕು. ಕಳೆದ ಎರಡು ವರ್ಷಗಳಿಂದ ನಾನು ಅದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇನೆ. ಇನ್ನು ನನ್ನನ್ನು ದ್ರಾವಿಡ್ ಅವರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ.
ಏಕೆಂದರೆ ಭಾರತೀಯ ಕ್ರಿಕೆಟ್‍ನಲ್ಲಿ ಕೇವಲ ಒಂದು ಗೋಡೆ ಇದೆ. ಅದು ರಾಹುಲ್ ದ್ರಾವಿಡ್ ಮಾತ್ರ. ಆ ಸ್ಥಾನವನ್ನು ತುಂಬುವುದು ಅಸಾಧ್ಯ ಎಂದು ರಹಾನೆ ಅಭಿಪ್ರಾಯಪಟ್ಟರು.

ಈ ವೇಳೆ ರಾಜಸ್ಥಾನ ರಾಯಲ್ಸ್ ತಂಡದ ಬಗ್ಗೆ ಮಾತನಾಡಿರುವ ರಹಾನೆ, ಕೆಲವೊಮ್ಮೆ ಪಂದ್ಯದಲ್ಲಿ ಗೆಲವು ದಾಖಲಿಸುತ್ತೇವೆ. ಮತ್ತೆ ಕೆಲವೊಮ್ಮೆ ಸೋಲನುಭವಿಸುತ್ತೇವೆ. ಎಲ್ಲಕ್ಕಿಂತ ಪ್ರಮುಖವಾದುದು ಉತ್ತಮ ಆಟವಾಡಬೇಕು. ಈ ವರ್ಷ ತಂಡ ಉತ್ತಮವಾಗಿ ಆಡುತ್ತಿದೆ. ಅಂತಿಮ ಪಂದ್ಯದಲ್ಲಿ ಗೆಲವು ದಾಖಲಿಸಿದರೆ, ಮುಂದಿನ ಹಂತಕ್ಕೆ ಪ್ರವೇಶಿಸುತ್ತೇವೆ. ಹಾಗಾಗಿ ಈ ಪಂದ್ಯದಲ್ಲಿ ಎಲ್ಲರೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದರು.

ಪ್ರತಿ ಆಟಗಾರರು ಅತ್ಯುತ್ತಮ ಪ್ರಯತ್ನ ನೀಡಲಿದ್ದಾರೆ. ಫಲಿತಾಂಶದ ಮೇಲೆ ಯಾರು ಚಿಂತಿಸುತ್ತಿಲ್ಲ. ಉತ್ತಮ ಆಟ ಪ್ರದರ್ಶಿಸಿದರೆ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ವಿಶ್ವಾಸವಿದೆ. ಇನ್ನು ಅಂತಿಮ ಪಂದ್ಯದಲ್ಲಿ ಎದುರಾಳಿ ತಂಡದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಕೆಕೆಆರ್ ಆಡಿರುವುದನ್ನು ನೋಡಿದ್ದೇವೆ. ಹಾಗಾಗಿ ಅವರನ್ನು ಎದುರಿಸಲು ಸಕಲ ಸಿದ್ಧತೆ ನಡೆಸಿದ್ದೇವೆ ಎಂದರು.

SCROLL FOR NEXT