ಮುಂಬೈ : ಆರಂಭಿಕ ಶೇನ್ ವಾಟ್ಸನ್ ಅವರ ಅಬ್ಬರದ ಶತಕ ಹಾಗೂ ಕ್ರಿಸ್ ಮೋರಿಸ್ ಕರಾರುವಾಕ್ ಬೌಲಿಂಗ್ ಸಹಾಯದಿಂದ ರಾಜಸ್ಥಾನ ರಾಯಲ್ಸ್ ತಂಡ, ಶನಿವಾರ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 9 ರನ್ಗಳ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ್ಧ ರಾಜಸ್ಥಾನ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕೋಲ್ಕತ್ತಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಈ ಗೆಲುವಿನಿಂದ ರಾಜಸ್ಥಾನ ತಂಡ ಅಂಕಪಟ್ಟಿಯಲ್ಲಿ 2 ನೇ ಸ್ಥಾನಕ್ಕೇರಿ , ಪ್ಲೇ ಆಫ್ ನಲ್ಲಿನ ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ.
ಇಲ್ಲಿನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್‍ಗೆ ಇಳಿದ ರಾಜಸ್ಥಾನ ತಂಡಕ್ಕೆ, ಆರಂಭಿಕರಾದ ಅಜಿಂಕ್ಯ ರಹಾನೆ ಹಾಗೂ ಶೇನ್ ವ್ಯಾಟ್ಸನ್ ಉತ್ತಮ ಆರಂಭ ನೀಡಿದರು. 6.5 ಓವರ್‍ಗಳಲ್ಲಿ 80 ರನ್ ಚಚ್ಚಿದ ಈ ಇಬ್ಬರೂ, ಇನಿಂಗ್ಸ್‍ಗೆ ಭದ್ರ ಅಡಿಪಾಯ ಹಾಕಿದರು. ಏಳನೇ ಓವರ್‍ನ ಕೊನೆಯ ಎಸೆತದಲ್ಲಿ ಅಜಿಂಕ್ಯ ವಿಕೆಟ್ ಉರುಳಿಸಿತು. ಅವರ ನಂತರ ಬಂದ ಬ್ಯಾಟ್ಸ್ ಮನ್ ಗಳ್ಯಾರೂ ಶೇನ್ ವ್ಯಾಟ್ಸನ್ ಅವರಿಗೆ ಉತ್ತಮ ಬೆಂಬಲ ನೀಡಲಿಲ್ಲ.
ಸ್ಟೀವನ್ ಸ್ಮಿತ್, ಸ್ಯಾಮ್ಸನ್, ಫಾಲ್ಕನರ್ , ಕರುಣ್ ನಾಯರ್ ಕ್ರಿಸ್ ಮೋರಿಸ್ ಇವರಲ್ಲಿ ಯಾರೂ ಗಟ್ಟಿಯಾಗಿ ನಿಂತು ಆಡಲಿಲ್ಲ, ಆದರೆ ಕ್ರೀಸ್ ನ ಮತ್ತೊಂದು ತುದಿಯಲ್ಲಿ ದಿಟ್ಟತನ ಬ್ಯಾಟಿಂಗ್ ತೋರಿದ ವ್ಯಾಟ್ಸನ್ (104 ರನ್, 59 ಎಸೆತ, 9 ಬೌಂಡರಿ, 5 ಸಿಕ್ಸರ್) ಎದುರಾಳಿ ತಂಡದ ಬೌಲರ್‍ಗಳ ಬೆವರಿಳಿಸಿದರು. ಸಿಕ್ಕ ಅವಕಾಶಗಳಲ್ಲಿ ತಪ್ಪದೇ ಬೌಂಡರಿ, ಸಿಕ್ಸರ್‍ಗಳನ್ನು ಸಿಡಿಸಿದ ಅವರು ಅಭಿಮಾನಿಗಳನ್ನು ರಂಜಿಸಿದರಲ್ಲದೆ, ತಂಡದ ಮೊತ್ತ 200 ರನ್ ಮೊತ್ತದ ಗಡಿಗೆ ನಿಲ್ಲುವಲ್ಲಿ ಉದಾತ್ತ ಕಾಣಿಕೆ ನೀಡಿದರು.
ರಾಜಸ್ಥಾನ ನೀಡಿದ್ದ ಸವಾಲನ್ನು ಬೆನ್ನಟ್ಟಿದ ಕೋಸ್ಕತ್ತಾ, ಕೇವಲ 21 ರನ್ ಮೊತ್ತಕ್ಕೆ ಆರಂಭಿಕರಾದ ರಾಬಿನ್ ಉತ್ತಪ್ಪ ಹಾಗೂ ಗೌತಂ ಗಂಭೀರ್ ಅವರ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ತಂಡಕ್ಕೆ ಆಸರೆಯಾಗಿದ್ದು ಯೂಸುಫ್ ಪಠಾಣ್. ಮೂರನೇ ವಿಕೆಟ್ ಗೆ ಮನೀಶ್ ಪಾಂಡೆ ಜೊತೆ 56 ರನ್ ಪೇರಿಸಿದ ಅವರು, 4ನೇ ವಿಕೆಟ್‍ಗೆ ಆಂಡ್ರೆ ರಸೆಲ್ ಜೊತೆ 55 ರನ್‍ಗಳಜೊತೆಯಾಟವಾಡಿದರು. 14ನೇ ಓವರ್‍ನಲ್ಲಿ ರಸೆಲ್ ವಿಕೆಟ್ ಉರುಳಿದರೂ ಧೃತಿಗೆಡದೇ ಯೂಸುಫ್ ಆರ್ಭಟಿಸುತ್ತಲೇ ಸಾಗಿದರು. ಆದರೆ, 16ನೇ ಓವರ್ ಲ್ಲಿ ಯೂಸುಫ್ (44 ರನ್ , 35 ಎಸೆತ ,5 ಬೌಂಡರಿ , 1 ಸಿಕ್ಸರ್ ) ಅವರ ವಿಕೆಟ್ ಉರುಳುವ ಮೂಲಕ, ಕೋಲ್ಕತಾದ ಜಯದ ಆಸೆ ಕಮರಿತು. ಈ ಹಂತದಲ್ಲಿ ಕ್ರೀಸ್‍ನಲ್ಲಿದ್ದ ಶಕೀಬ್ ಅಲ್ ಹಸನ್ ಅವರಿಗೆ ಉಳಿದ ಬ್ಯಾಟ್ಸ್ ಮೆನ್ ಗಳಿಂದ ಸರಿಯಾದ ಬೆಂಬಲ ದೊರೆಯಲಿಲ್ಲ. ಅಜರ್ ಮಹಮೂದ್, ಪಿಯೂಶ್ ಚಾವ್ಲಾ ಬೇಗನೇ ವಿಕೆಟ್ ಒಪ್ಪಿಸಿದರು.
ಅಂತಿಮ ಹಂತದಲ್ಲಿ ಉಮೇಶ್ ಯಾದವ್ ಕೊಂಚ ಅಬ್ಬರಿಸಿದರೂ,ಗೆಲವು ತರಲಾಗಲಿಲ್ಲ.