ಕ್ರೀಡೆ

ಭಾರತ-ಪಾಕ್ ಕ್ರಿಕೆಟ್ ಸರಣಿಗೆ ಕೇಂದ್ರ ಸರ್ಕಾರದ ಬೆಂಬಲ

Srinivas Rao BV

ಕೋಲ್ಕತಾ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್  ಸಂಬಂಧ ಪುನರಾರಂಭಕ್ಕೆ ಕೇಂದ್ರ ಸರ್ಕಾರವೂ ಗ್ರೀನ್ ಸಿಗ್ನಲ್ ನೀಡಿದೆ.

ಮುಂದಿನ ಎಂಡು ವರ್ಷಗಳಲ್ಲಿ ಐದು ಸರಣಿಗಳನ್ನು ನಡೆಸಲು ಬಿಸಿಸಿಐ ಹಾಗೂ ಪಿಸಿಬಿ ನಡುವಿನ ಒಪ್ಪಂದದ ಕುರಿತು ಪ್ರತಿಕ್ರಿಯೆ ನೀಡಿರುವ  ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಸರ್ಬಾನಂದ ಸೋನೋವಾಲ್‌, ಕ್ರೀಡಾ ಸಚಿವನಾಗಿ ಕ್ರೀಡೆಯನ್ನು ಪ್ರೋತ್ಸಾಹಿಸುವುದು ತಮ್ಮ ಮುಖ್ಯ ಉದ್ದೇಶ. ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿಗಾಗಿ ಪಾಕ್ ಹಾಗೂ ಭಾರತದ ನಡುವೆ ಕ್ರಿಕೆಟ್ ಸರಣಿ ನಡೆಯಬೇಕಿದೆ ಎಂದು ಹೇಳಿದ್ದಾರೆ. ಆದರೆ ಸರಣಿ ನಡೆಸುವುದಕ್ಕೂ ಮುನ್ನ  ಹಲವು ವಿಷಯಗಳತ್ತ ಗಮನಹರಿಸಬೇಕಿದೆ ಎಂದು ಸೋನೋವಾಲ್ ಹೇಳಿದ್ದಾರೆ.

ಭಾರತ-ಪಾಕ್ ನಡುವೆ ಕ್ರಿಕೆಟ್ ಸರಣಿ ನಡೆಸುವ ಸಂಬಂಧ ಬಿಸಿಸಿನೊಂದಿಗೆ ಸಭೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಮಂಡಲಿ ಅಧ್ಯಕ್ಷ ಶಹರ್ಯಾರ್ ಖಾನ್ ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದ್ದರು. ಉಭಯ ದೇಶಗಳ ಕ್ರಿಕೆಟ್ ಸರಣಿಯನ್ನು ಪುನರಾರಂಭಿಸುವುದಕ್ಕೆ ತಾತ್ವಿಕ ಒಪ್ಪಿಗೆ ನೀಡಿದ್ದ ಬಿಸಿಸಿಐ ಅಧ್ಯಕ್ಷ ಜಗನ್ ಮೋಹನ್ ದಾಲ್ಮಿಯ, ಸರಣಿ ನಡೆಸುವುದಕ್ಕೆ ಕೇಂದ್ರ ಸರ್ಕಾರದ ಸಂಪೂರ್ಣ ಒಪ್ಪಿಗೆ ಅಗತ್ಯ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ಆಯೋಜಿಸುವ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರ ಮಹತ್ವ ಪಡೆದುಕೊಂಡಿತ್ತು. ಆದರೆ ಸ್ವತಃ ಕ್ರೀಡಾ ಸಚಿವರೇ ಭಾರತ ಮತ್ತು ಪಾಕ್ ನಡುವಿನ ಸರಣಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವುದರಿಂದ ಕೇಂದ್ರ ಸರ್ಕಾರ ಸಹ ಒಪ್ಪಿಗೆ ನೀಡಿದಂತಾಗಿದೆ.

 2012-13 ರಲ್ಲಿ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನ ತಂಡ, ಇಲ್ಲಿ ಮೂರು ಪಂದ್ಯಗಳ ಟಿ-20 ಸರಣಿ ಆಡಿತ್ತು. ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದಿದ್ದ ಪಾಕಿಸ್ತಾನ, ಟಿ20 ಸರಣಿಯನ್ನು 1-1 ಸಮಬಲದಲ್ಲಿ ಡ್ರಾ ಮಾಡಿಕೊಂಡಿತ್ತು. ಅದಾದ ಬಳಿಕ ಈವರೆಗೂ ಭಾರತ- ಪಾಕ್ ನಡುವೆ ಯಾವುದೇ ಸರಣಿ ನಡೆದಿಲ್ಲ.

SCROLL FOR NEXT