ಮುಂಬೈ: 2 ವರ್ಷಗಳ ಕಾಲ ಟೀಂ ಇಂಡಿಯಾದಿಂದ ದೂರವುಳಿದಿದ್ದ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಈಗ ಟೆಸ್ಟ್ ಟೀಂಗೆ ವಾಪಸ್ ಆಗಿದ್ದಾರೆ. ಬಾಂಗ್ಲಾದೇಶ ಪ್ರವಾಸ ಟೆಸ್ಟ್ ಪಂದ್ಯವನ್ನಾಡಲಿರುವ ಭಾರತೀಯ ತಂಡದ ಸದಸ್ಯರ ಹೆಸರನ್ನು ಬುಧವಾರ ಘೋಷಿಸಿದ್ದು, ಹರ್ಭಜನ್ ಸಿಂಗ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಸಂದೀಪ್ ಪಾಟೀಲ್ ನೇತೃತ್ವದ 5 ಮಂದಿ ಆಯ್ಕೆ ಸಮಿತಿ ಸದಸ್ಯರ ತಂಡವು ಪ್ರವಾಸ ಪಂದ್ಯವನ್ನಾಡುವ ತಂಡದ ಸದಸ್ಯರ ಆಯ್ಕೆ ಮಾಡಿದೆ.
ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಟೆಸ್ಟ್ ಟೀಂ ಹಾಗೂ ಏಕದಿನ ಪಂದ್ಯಗಳ
ನ್ನಾಡಲಿರುವ ಟೀಂನ್ನು ಆಯ್ಕೆ ಸಮಿತಿ ಘೋಷಿಸಿದೆ. ಬಾಂಗ್ಲಾ ವಿರುದ್ಧ ಆಡಲಿರುವ ಟೆಸ್ಟ್ ಟೀಂ ನ ನಾಯಕತ್ವವನ್ನು ವಿರಾಟ್ ಕೊಹ್ಲಿ ವಹಿಸಲಿದ್ದು, ಏಕದಿನ ಪಂದ್ಯವನ್ನಾಡಲಿರುವ ಟೀಂಗೆ ಮಹೇಂದ್ರ ಸಿಂಗ್ ಧೋನಿಯೇ ನಾಯಕ.
ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ಗೆ ಸ್ಥಾನ ನೀಡಿರುವುದೇ ತಂಡಗಳಲ್ಲಿನ ಪ್ರಧಾನ ಬದಲಾವಣೆ. 2013, ಮಾರ್ಚ್ 15ರಂದು ಹೈದ್ರಾಬಾದ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವನ್ನಾಡಿದ ನಂತರ ಹರ್ಭಜನ್ ಸಿಂಗ್ಗೆ ತಂಡದಲ್ಲಿ ಸ್ಥಾನ ಸಿಗಲೇ ಇಲ್ಲ. ಆ ಟೆಸ್ಟ್ ಹರ್ಭಜನ್ರ 101ನೇ ಟೆಸ್ಟ್ ಆಗಿತ್ತು. ಟೆಸ್ಟ್ ಪಂದ್ಯಗಳಲ್ಲಿ ಭಜ್ಜಿ ಒಟ್ಟು 413 ವಿಕೆಟ್ಗಳನ್ನು ಕಬಳಿಸಿದ್ದರು.
ಅದೇ ವೇಳೆ ಟೆಸ್ಟ್ ಟೀಂನಿಂದ ಎಡಕೈ ಸ್ಪಿನ್ನರ್ ರವೀಂದ್ರ ಜಡೇಜಾಗೆ ಕೋಕ್ ನೀಡಲಾಗಿದೆ. ಜಡೇಜಾ ಏಕದಿನ ಪಂದ್ಯ ಟೀಂನಲ್ಲಿದ್ದಾರೆ.
ವಿಶ್ವಕಪ್ ಪಂದ್ಯದ ವೇಳೆ ಗಾಯಗೊಂಡಿದ್ದ ಮೀಡಿಯಂ ಪೇಸರ್ ಮುಹಮ್ಮದ್ ಶಮಿಗೂ ಟೀಂನಲ್ಲಿ ಸ್ಥಾನ ಸಿಕ್ಕಿಲ್ಲ. ಶಮಿ ಬದಲು ಏಕದಿನ ಟೀಂನಲ್ಲಿ ಧವಳ್ ಕುಲಕರ್ಣಿಗೆ ಸ್ಥಾನ ನೀಡಲಾಗಿದೆ. ಟೆಸ್ಟ್ ಟೀಂನಲ್ಲಿ ವೃದ್ಧಿಮಾನ್ ಸಾಹು ವಿಕೆಟ್ ಕೀಪರ್ ಆಗಲಿದ್ದಾರೆ.
ತಂಡಗಳು
ಏಕದಿನ ಪಂದ್ಯ: ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ಅಜಿಂಕ್ಯ ರೆಹಾನೆ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಂಬಟಿ ರಾಯ್ಡು, ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮೋಹಿತ್ ಶರ್ಮಾ, ಸ್ಟುವರ್ಟ್ ಬಿನ್ನಿ, ಧವಳ್ ಕುಲಕರ್ಣಿ
ಟೆಸ್ಟ್ ಪಂದ್ಯ: ವಿರಾಟ್ ಕೊಹ್ಲಿ (ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಕೆ. ಎಲ್ ರಾಹುಲ್, ಚೇತೇಶ್ವರ್ ಪೂಜಾರ್, ಅಜಿಂಕ್ಯ ರೆಹಾನೆ, ರೋಹಿತ್ ಶರ್ಮಾ, ವೃದ್ಧಿಮಾನ್ ಸಾಹಾ, ಆರ್. ಅಶ್ವಿನ್, ಹರ್ಭಜನ್ ಸಿಂಗ್, ಕರ್ಣ್ ಶರ್ಮಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ವರುಣ್ ಆರೋನ್, ಇಶಾಂತ್ ಶರ್ಮಾ