ಕ್ರೀಡೆ

3 ಐಪಿಎಲ್ ಪಂದ್ಯ ಫಿಕ್ಸ್?

Srinivasamurthy VN

ನವದೆಹಲಿ: ದೇಶೀಯ ಕ್ರೀಡಾ ಜಾತ್ರೆ ಐಪಿಎಲ್ ಇನ್ನೇನು ಮುಕ್ತಾಯ ಹಂತ ತಲುಪುತ್ತಿದ್ದಂತೆ, ಟೂರ್ನಿಗೆ ಫಿಕ್ಸಿಂಗ್ ಕಳಂಕ ಮೆತ್ತಿಕೊಳ್ಳುವ ಸಂದರ್ಭ ಬಂದೊದಗಿದೆ. ಈ ಬಾರಿಯ ಐಪಿಎಲ್‍ನಲ್ಲಿ ಮೂರು ಪಂದ್ಯಗಳು ಫಿಕ್ಸಿಂಗ್‍ಗೆ ಒಳಗಾಗಿರುವ ಬಗ್ಗೆ ಗುಮಾನಿಯೆದ್ದಿದೆ.

ದೇಶದ ಹಲವು ಪ್ರಮುಖ ನಗರಗಳಲ್ಲಿ ಕೇಂದ್ರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ನಡೆಸಿರುವ ದಾಳಿಯ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದ್ದು, ಐಪಿಎಲ್‍ನ ಪಾವಿತ್ರ್ಯತೆ ಬಗ್ಗೆ ಮತ್ತೊಮ್ಮೆ ಅನುಮಾನದ ದೃಷ್ಟಿ ಹರಿಸುವಂತಾಗಿದೆ.

ಎಲ್ಲಿಲ್ಲಿ ದಾಳಿ?
ಕೇಂದ್ರದ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಶುಕ್ರವಾರ ದೆಹಲಿ, ಅಹಮದಾಬಾದ್ ಹಾಗೂ ಜೈಪುರದ ಕೆಲ ಪ್ರದೇಶಗಳ ಮೇಲೆ ದಾಳಿ ನಡೆಸಿ, ಐಪಿಎಲ್ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್‍ಗೆ ಸಂಬಂಧಿಸಿದಂತೆ ಇಬ್ಬರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಅಹಮದಾಬಾದ್ ನಲ್ಲಿ ಬಂಧಿತನಾಗಿರುವ ಮುಕೇಶ್ ಶರ್ಮಾ ಹಾಗೂ ದೆಹಲಿಯಲ್ಲಿ ಬಂಧಿತನಾಗಿರುವ ಸುಖ್ವಿಂದರ್ ಸಿಂಗ್-ಇಬ್ಬರೂ ಬೆಟ್ಟಿಂಗ್ ಪ್ರಪಂಚದಲ್ಲಿ ಪ್ರಮುಖರು ಎಂದು ಹೇಳಲಾಗಿದೆ.

ದಾಳಿಯ ಬಗ್ಗೆ ಹೆಸರನ್ನೇಳಲು ಇಚ್ಛಿಸದ ಇಡಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಬಂಧಿತರಿಬ್ಬರೂ ಬೆಟ್ಟಿಂಗ್ ಲೋಕದ ದೈತ್ಯರು ಎಂದು ಬಣ್ಣಿಸಿದ್ದಾರೆ. ಈವರೆಗಿನ ಯಾವುದೇ
ಕಾರ್ಯಾಚರಣೆಗಳಲ್ಲಿ ಇವರು ಸಿಕ್ಕಿಹಾಕಿಕೊಂಡಿರಲಿಲ್ಲ. ಈ ಬಾರಿಯ ಐಪಿಎಲ್‍ನಲ್ಲಿ ಸುಮಾರು ಮೂರು ಪಂದ್ಯಗಳು ಫಿಕ್ಸ್ ಆಗಿರುವ ಬಗ್ಗೆ ನಮಗೆ ಪ್ರಬಲ ಮಾಹಿತಿಗಳು ಲಭ್ಯವಾಗಿವೆ ಎಂದಿರುವುದಾಗಿ `ದ ಇಂಡಿಯನ್ಸ್ ಎಕ್ಸ್‍ಪ್ರೆಸ್' ತನ್ನ ವರದಿಯಲ್ಲಿ ತಿಳಿಸಿದೆ.

ಮತ್ತೊಬ್ಬನಿಗೆ ಸಮನ್ಸ್

ಬೆಟ್ಟಿಂಗ್‍ನಲ್ಲಿ ಸಕ್ರಿಯನಾಗಿ ಭಾಗಿಯಾಗಿರುವ ಆರೋಪ ಹೊತ್ತಿರುವ ಮುಂಬೈನ ಥಾಣೆಯಲ್ಲಿರುವ ಉಲ್ಲಾಸ ನಗರದ ಅನಿಲ್ ಜೈಸಿಂಘಾನಿಯಾ ಎಂಬಾತನ ಮನೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು `ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ಆದರೆ, ಆತ ಅಧಿಕಾರಿಗಳು ಸಿಕ್ಕಿಬಿದ್ದಿಲ್ಲ. ದಾಳಿ ನಡೆಸಿದ ವೇಳೆ, ಆತ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವುದು ತಿಳಿದುಬಂದಿದ್ದು ಗುಣ ಮುಖನಾದ ಕೂಡಲೇ ವಿಚಾರಣೆಗಾಗಿ ಇಡಿ ಕಚೇರಿಗೆ ಹಾಜರಾಗುವಂತೆ ಅಧಿಕಾರಿಗಳು ಆತನಿಗೆ ಸಮನ್ಸ್ ಜಾರಿಗೊಳಿಸಿದ್ದಾರೆ.

ಹವಾಲಾ ಹಣ ಬಳಕೆ
ಭಾರತದಲ್ಲಿ ವಸೂಲಿಯಾಗುತ್ತಿರುವ ಹವಾಲಾ ಹಣವು, ಬೆಟ್ಟಿಂಗ್ ಹಾಗೂ ಪಿsಕ್ಸಿಂಗ್ ದಂಧೆಯಲ್ಲಿ ಬಳಕೆಯಾಗುತ್ತಿದೆ ಎಂದು ಇಡಿ ನ್ಯಾಯಾಲಯದಲ್ಲಿ ವಿವರಣೆ ನೀಡಿದೆ ಎಂದು `ಡಿಎನ್‍ಎ' ವೆಬ್‍ಸೈಟ್ ತನ್ನ ವರದಿಯಲ್ಲಿ ಹೇಳಿದೆ. ಬಂಧಿತ ಮುಕೇಶ್‍ನನ್ನು ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ವೇಳೆ ಇಡಿ ಇಲಾಖೆ ನ್ಯಾಯಾಧೀಶರ ಮುಂದೆ ದಾಳಿಯ ಬಗೆಗಿನ ವಿವರಗಳನ್ನು ಸಲ್ಲಿಸಿತು. ಅದರಂತೆ, ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ ಪ್ರಕರಣಗಳು ವಿದೇಶಗಳಲ್ಲೂ ನಡೆಯುತ್ತಿವೆ. ಭಾರತದಲ್ಲಿ ಸಂಗ್ರಹಿಸಲ್ಪಡುವ ಹವಾಲಾ ಹಣ, ವಿದೇಶಿಗಳಲ್ಲಿದ್ದುಕೊಂಡು ಫಿಕ್ಸಿಂಗ್ ನಡೆಸುತ್ತಿರುವ ಬುಕ್ಕಿಗಳ ಕೈ ಸೇರುತ್ತಿವೆ.

ಬಂಧಿತರಾದ ಮುಖೇಶ್ ಹಾಗೂ ಸುಖ್ವಿಂದರ್ ಅವರು ವಿದೇಶಿ ಹಾಗೂ ದೇಶಿ ಬುಕ್ಕಿಗಳ ನಡುವೆ ಈ ಹಣದ ವ್ಯವಹಾರಗಳನ್ನು ನಿರ್ವಹಿಸುವ ಪ್ರಮುಖ ಕೊಂಡಿಗಳಾಗಿದ್ದಾರೆ ಎಂದು ಹೇಳಿತು.

ಅಲ್ಲದೆ, ಮುಂದಿನ ವಿಚಾರಣೆಗಾಗಿ ಆರೋಪಿಗಳನ್ನು ತಮ್ಮ ವಶಕ್ಕೆ ನೀಡಬೇಕೆಂದು ಮನವಿ ಸಲ್ಲಿಸಿತು. ಇಡಿ ಇಲಾಖೆಯ ಮನವಿ ಸ್ವೀಕರಿಸಿದ ನ್ಯಾ.ಅಜಯ್ ಗಾರ್ಗ್, ಆರೋಪಿಗಳನ್ನು
ಮುಂದಿನ ವಿಚಾರಣೆಗಾಗಿ ಇಡಿ ಅಧಿಕಾರಿಗಳ ವಶಕ್ಕೆ ಒಪ್ಪಿಸಲು ಅನುಮತಿ ನೀಡಿದರು. ಅಲ್ಲದೆ, ಅಹಮದಾಬಾದ್‍ನಲ್ಲಿ ಬಂಧಿತ ನಾಗಿರುವ ಆರೋಪಿ ಮುಕೇಶ್‍ನನ್ನು ಸೋಮವಾರ
ಅಹಮದಾಬಾದ್ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಸೂಚಿಸಿದರು.

ಪೊಲೀಸರ ಸಾಥ್ ?
ಥಾಣೆಯ ಉಲ್ಲಾಸ್ ನಗರದಲ್ಲಿರುವ ಉದ್ಯಮಿ ಅನಿಲ್ ಜೈಸಿಂಘಾನಿಯಾ ಸಹ ದೆಹಲಿಯಲ್ಲಿ ಪ್ರಮುಖ ಬುಕ್ಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈತನಿಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳ ರಕ್ಷಣೆಯಿದೆ ಎಂದು ಟೈಮ್ಸ್ ನೌ ವಾಹಿನಿ ವರದಿ ಮಾಡಿದೆ.ಶುಕ್ರವಾರ ಸಿಂಘಾನಿಯಾ ವಿರುದ್ಧ ಯಾವುದೇ ಕಾರ್ಯಾಚರಣೆ ನಡೆಸದಿರುವಂತೆ ಮುಂಬೈನ ಪೊಲೀಸ್ ಅಧಿಕಾರಿಗಳು ಇಡಿ
ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿದೆ.

ಇಬ್ಬರು ಅಧಿಕಾರಿಗಳಿಗೆ ದುಬಾರಿ ಗಿಫ್ಟ್
2013ರ ಐಪಿಎಲ್ ವೇಳೆ ಬಿಸಿಸಿಐನ ಇಬ್ಬರು ಸಮನ್ವಯ ಅ„ಕಾರಿಗಳಿಗೆ ಕೆಲವು ಫ್ರಾಂಚೈಸಿಗಳು ದುಬಾರಿ ಬೆಲೆಯ ಉಡುಗೊರೆ ನೀಡಿವೆ ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ (ಎಸಿಯು)ದ ಅಧಿಕಾರಿಗಳು ಎಸಿಯು ಮುಖ್ಯಸ್ಥ ರವಿ ಸಾನ್ವಿ ಅವರಿಗೆ ದೂರು ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ದೇಶದ ಅಲ್ಲಲ್ಲಿ ಇಡಿ ಅಧಿಕಾರಿಗಳು ಬೆಟ್ಟಿಂಗ್ ಅಡ್ಡೆಗಳ ಮೇಲೆ ದಾಳಿ ನಡೆಸಿ ಬುಕ್ಕಿಗಳನ್ನು ಬಂಧಿಸಿರುವ ಬೆನ್ನಲ್ಲೇ ಈ ವಿಚಾರವು `ದ ಇಂಡಿಯನ್ ಎಕ್ಸ್‍ಪ್ರೆಸ್' ವರದಿಯಲ್ಲಿ ಬಹಿರಂಗಗೊಂಡಿದ್ದು, ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

2013ರ ಐಪಿಎಲ್ ಫಿಕ್ಸಿಂಗ್ ಹಗರಣ ಹೊರಬಿದ್ದ ಮೇಲೆ, ಪ್ರತಿಯೊಂದು ಐಪಿಎಲ್ ತಂಡಕ್ಕೂ ಒಬ್ಬೊಬ್ಬ ಸಮನ್ವಯ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಹಾಗಾಗಿ, ಸನ್ ರೈಸರ್ಸ್ ತಂಡಕ್ಕೆ ಮೇಜರ್ ಐ.ಸಿ. ಯಾದವ್ ಹಾಗೂ ಬ್ರಿಗೇಡಿಯರ್ ವಿಜಯ್ ಸಿಂಗ್ ಅವರನ್ನು ಚೆನ್ನೈ ತಂಡಕ್ಕೆ ಸಮನ್ವಯ ಅಧಿಕಾರಿಗಳಾಗಿ ನಿಯೋಜಿತಗೊಂಡಿದ್ದರು. 2013ರ ಐಪಿಎಲ್ ವೇಳೆ, ಯಾದವ್ ಅವರಿಗೆ ಮಾಯಂಕ್ ಲ್ಯಾಪ್‍ಟಾಪ್ ನೀಡಲಾಗಿದ್ದರೆ, ವಿಜಯ್ ಸಿಂಗ್ ಅವರಿಗೆ ಟೈಟನ್ ಕ್ಸೈಲಸ್ ಕೈಗಡಿಯಾರವನ್ನು ನೀಡಲಾಗಿದೆ.

ಈ ಉಡುಗೊರೆಗಳನ್ನು ನೀಡಲು ಯಾವುದೇ ಸಕಾರಣವಿಲ್ಲದಿದ್ದರೂ ಅವುಗಳನ್ನು ಸಮನ್ವಯ ಅಧಿಕಾರಿಗಳಿಗೆ ಅರ್ಪಿಸಲಾಗಿದೆ. ಇದರ ಹಿಂದಿನ ಕಾರಣಗಳು ಸ್ಪಷ್ಟವಾಗಬೇಕೆಂದು ಎಸಿಯು
ಅಧಿಕಾರಿಗಳು, ಸಾನ್ವಿಯವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

SCROLL FOR NEXT