ನ್ಯೂಯಾರ್ಕ್: ಭಾರತ- ಪಾಕಿಸ್ತಾನ ನಡುವಿನ ಸಂಬಂಧ ಸುಧಾರಣೆಯ ಅಗತ್ಯ ಇದೆ ಎಂದಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು, ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ಕ್ರಿಕೆಟ್ ಸರಣಿ ಆಯೋಜನೆ ಒಂದು ಉತ್ತಮ ಮಾರ್ಗ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಉಭಯ ದೇಶಗಳ ನಡುವಿನ ಕ್ರಿಕೆಟ್ ಸಂಬಂಧ ಮುಂದುವರೆಸುವ ಬಗ್ಗೆ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಬೇಕು. ಚೆಂಡು ಸರ್ಕಾರದ ಅಂಗಳದಲ್ಲಿದೆ ಎಂದು ತೆಂಡೂಲ್ಕರ್ ಹೇಳಿದ್ದಾರೆ.
ಭಾರತ-ಪಾಕ್ ನಡುವಿನ ಕ್ರಿಕೆಟ್ ಸಂಬಂಧ ಮುಂದುವರೆಸುವ ಬಗ್ಗೆ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿನ್, ಇದು ಎರಡು ದೇಶಗಳ ನಡುವಿನ ವಿಷಯ. ಹೀಗಾಗಿ ಸರ್ಕಾರವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.
'ಭಾರತ - ಪಾಕ್ ನಡುವಿನ ಸಂಬಂಧ ಸುಧಾರಣೆಯಾಗುವ ಅಗತ್ಯ ಇದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವದಾದರೆ, ಉಭಯ ದೇಶಗಳ ನಡುವೆ ಕ್ರಿಕೆಟ್ ಆಯೋಜನೆ ಒಂದು ಉತ್ತಮ ಮಾರ್ಗ' ಎಂದಿದ್ದಾರೆ.