ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ಮಂಡಲಿಯ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಿದ ಎರಡು ವಾರಗಳ ನಂತರ, ಭಾರತಕ್ಕೆ ಪ್ರವಾಸ ಮಾಡಿದ್ದೇಕೆ ಎಂದು ಕೇಳಿ ವರದಿ ಸಲ್ಲಿಸುವಂತೆ ಪಾಕಿಸ್ತಾನ ಕ್ರೀಡಾ ಸಚಿವ ಮಿಯಾನ್ ರಿಯಾಜ್ ಹುಸೇನ್ ಪಿರ್ಜಾದಾ ಆಗ್ರಹಿಸಿದ್ದಾರೆ.
ಪಿಸಿಬಿ ಅಧ್ಯಕ್ಷ ಮುಂಬೈಗೆ ಭೇಟಿ ನೀಡಿದ ವೇಳೆಯಲ್ಲಿ ಶಿವಸೇನೆ ಮುಂಬೈ ಬಿಸಿಸಿಐ ಕಚೇರಿ ಎದುರು ಪ್ರತಿಭಟಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದು, ಭಾರತಕ್ಕೆ ಪ್ರವಾಸ ಮಾಡುವುದಕ್ಕೂ ಮುಂಚಿತವಾಗಿ ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಸರ್ಕಾರದ ಅನುಮತಿ ಪಡೆದಿದ್ದರೆ ಎಂದು ಪಿರ್ಜಾದಾ ಕೇಳಿದ್ದಾರೆ ಎಂದು ಡಾನ್ ಅಂತರ್ಜಾಲ ಪತ್ರಿಕೆ ವರದಿ ಮಾಡಿದೆ.
ಶಿವಸೇನೆ ನಡೆಸಿದ ಪ್ರತಿಭಟನೆಯಿಂದ ಅಕ್ಟೋಬರ್ ೧೮ ರಂದು ಮುಂಬೈನಲ್ಲಿ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಮತ್ತು ಶಹರ್ಯಾರ್ ಖಾನ್ ನಡುವೆ ನಡೆಯಬೇಕಿದ್ದ ಸಭೆ ರದ್ದಾಗಿತ್ತು.
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವ ಕಳೆದ ಎಂಟು ವರ್ಷಗಳಿಂದ ರದ್ದಾಗಿರುವ ಕ್ರಿಕೆಟ್ ಸರಣಿಯ ಬಗ್ಗೆ ಮಾತುಕತೆ ನಡೆಸಲು ಶಹರ್ಯಾರ್ ಖಾನ್ ಭಾರತಕ್ಕೆ ಆಗಮಿಸಿದ್ದರು.
"ವಿವರಣೆಯ ಜೊತೆಗೆ ನಡೆದ ಘಟನೆಗಳ ಬಗ್ಗೆ ಮಾಹಿತಿ ತಿಳಿಸುವಂತೆ ಪಾಕಿಸ್ತಾನ ಸಚಿವಾಲಯ ತಿಳಿಸಿದೆ" ಎಂದು ವರದಿ ಮಾಡಲಾಗಿದೆ.