ಸಚಿನ್ ತೆಂಡೂಲ್ಕರ್ -ಶೇನ್ ವಾರ್ನ್
ನ್ಯೂಯಾರ್ಕ್: ಕ್ರಿಕೆಟ್ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಶೇನ್ ವಾರ್ನ್ ನೇತೃತ್ವದಲ್ಲಿ ನಡೆಯುತ್ತಿರುವ ನಿವೃತ್ತ ಕ್ರಿಕೆಟಿಗರ ಪಂದ್ಯ ಆಲ್ ಸ್ಟಾರ್ಸ್ ಕ್ರಿಕೆಟ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಶೇನ್ ವಾರ್ನ್ನ ವಾರ್ನ್ ವಾರಿಯರ್ಸ್ ತಂಡ ಗೆಲವು ಸಾಧಿಸಿದೆ.
ಶೇನ್ ವಾರ್ನ್ರ ವಾರ್ನ್ ವಾರಿಯರ್ಸ್ ತಂಡ ಸಚಿನ್ ಅವರ ಸಚಿನ್ ಬ್ಲಾಸ್ಟರ್ಸ್ ತಂಡವನ್ನು 6 ವಿಕೆಟ್ಗಳಿಂದ ಪರಾಭವಗೊಳಿಸಿದೆ. ನ್ಯೂಯಾರ್ಕ್ನ ಸಿಟಿ ಫೀಲ್ಡ್ನ ಬೇಸ್ ಬಾಲ್ ಸ್ಟೇಡಿಯಂನಲ್ಲಿ ಶನಿವಾರ ಮಧ್ಯರಾತ್ರಿ ಈ ಪಂದ್ಯ ನಡೆದಿತ್ತು.
ಟಾಸ್ ಗೆದ್ದು ವಾರ್ನ್ ವಾರಿಯರ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಲಾಸ್ಟರ್ಸ್ ತಂಡದಲ್ಲಿ ಆರಂಭಿಕ ದಾಂಡಿಗರಾಗಿ ಕಣಕ್ಕಿಳಿದ ಸಚಿನ್ ತೆಂಡೂಲ್ಕರ್ ಮತ್ತು ವಿರೇಂದರ್ ಸೆಹ್ವಾಗ್ ಅದ್ಭುತ ಪ್ರದರ್ಶನವನ್ನು ನೀಡಿದರು. ಬೌಂಡರಿ, ಸಿಕ್ಸರ್ ಗಳೊಂದಿಗೆ ಸೆಹ್ವಾಗ್ ಹೊಡೆ ಬಡಿ ಆಟ ಆರಂಭಿಸಿದ್ದು, ಸಚಿನ್ ಉತ್ತಮ ಸಾಥ್ ನೀಡಿದ್ದರು. 22 ಎಸೆತಗಳಲ್ಲಿ 55 ರನ್ ಗಳಿಸಿ (250ಸ್ಟ್ರೈಕ್ ರೇಟ್ )ದ ಸೆಹ್ವಾಗ್ ತನ್ನಲ್ಲಿ ಇನ್ನೂ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ ಎಂದು ತೋರಿಸಿಕೊಟ್ಟರು.
ಆದರೆ ಸಚಿನ್ ಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಜತೆಯಾಟ ಉತ್ತಮವಾಗಿ ಸಾಗುತ್ತಿರುವ ಹೊತ್ತಲ್ಲಿ 27 ಎಸೆತಗಳಲ್ಲಿ 26 ರನ್ ಗಳಿಸಿ ವಾರ್ನ್ ಬಾಲ್ಗೆ ವಿಕೆಟ್ ಒಪ್ಪಿಸಿ ಸಚಿನ್ ಪೆವಿಲಿಯನ್ ಮರಳಿದರು. ಇದಾದ ನಂತರ ಕ್ರೀಸ್ಗಿಳಿದ ವೆಸ್ಟ್ ಇಂಡೀಸ್ನ ಕ್ರಿಕೆಟ್ ದಿಗ್ಗಜ ಬ್ರೇನ್ ಲಾರಾ ಎಂಟು ಎಸೆತಗಳಲ್ಲಿ 1 ರನ್ ನೀಡಿ ವಾರ್ನ್ ಬಾಲ್ ಗೆ ಔಟಾದರು.
ಆಮೇಲೆ ಬಂದ ಮಹೇಲಾ ಜಯವರ್ಧನೆ 18 ರನ್ ಗಳಿಸುವ ಮೂಲಕ ಸಚಿನ್ ತಂಡಕ್ಕೆ ಒಂದಷ್ಟು ಉತ್ತೇಜನ ನೀಡಿದರು. ಕಾರ್ಲ್ ಹೂಪರ್ ಮತ್ತು ಶೋನ್ ಪೊಲ್ಲಾಕ್ ತಲಾ 11 ರನ್ ಗಳಿಸಿದರು. ಸೌರವ್ ಗಂಗೂಲಿ ಹೊರಗುಳಿದಿರುವ ಈ ಪಂದ್ಯದಲ್ಲಿ ಸಚಿನ್ ತಂಡ 20 ಓವರ್ ಗಳಲ್ಲಿ 140 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ವಾರ್ನ್ ಮತ್ತು ಆ್ಯಂಡ್ರೂ ಸೈಮಂಡ್ಸ್ ತಲಾ 3 ವಿಕೆಟ್ ಗಳಿಸಿ ಮಿಂಚಿದರು.
240 ರನ್ಗಳ ಗುರಿಯನ್ನು ಬೆನ್ನತ್ತಿ ಕ್ರೀಸ್ಗಿಳಿದ ವಾರ್ನ್ ವಾರಿಯರ್ಸ್ ಆರಂಭದಲ್ಲೇ ಆಘಾತವನ್ನು ಅನುಭವಿಸಿತು. ಇನ್ನಿಂಗ್ಸ್ ಆರಂಭಿಸಿದ ಕಾಲೀಸ್ 12 ಎಸೆತಗಳಲ್ಲಿ 13 ರನ್ ಗಳಿಸಿ ರನೌಟ್ ಆದಾಗ ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೊಯೇಬ್ ಅಕ್ತರ್ ಮ್ಯಾಥ್ಯೂ ಹೇಡನ್ರ ವಿಕೆಟ್ ಕಬಳಿಸಿದರು. ಆಮೇಲೆ ಬಂದ ರಿಕಿ ಪಾಟಿಂಗ್ ತಂಡಕ್ಕೆ ಬೆನ್ನೆಲುಬಾಗಿ ನೀಂತರು. 38 ಎಸೆತಗಳಲ್ಲಿ 48 ರನ್ ಗಳಿಸಿದ (126 ಸ್ಟೈಕ್ ರೇಟ್ ) ರಿಕಿ ಪಾಟಿಂಗ್ ಅಜೇಯರಾಗಿ ಉಳಿದರು. 29 ಎಸೆತಗಳಲ್ಲಿ 41 ರನ್ ಗಳಿಸಿದ ಕುಮಾರ ಸಂಗಕ್ಕಾರ ಪಾಟಿಂಗ್ಗೆ ಉತ್ತಮ ಸಾಥ್ ನೀಡಿದ್ದರು. ಸಂಗಕ್ಕಾರ ಔಟಾದರೂ ಪಾಟಿಂಗ್ ತನ್ನ ಹೊಡೆಬಡಿ ದಾಳಿ ಮುಂದುವರಿಸಿದ್ದರು. ಇದಾದನಂತರ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಜಾಂಟಿ ರೋಡ್ಸ್ ಪಾಟಿಂಗ್ಗೆ ಜತೆಯಾಗಿ ನಿಂತಾಗ ಬ್ಲಾಸ್ಟರ್ಸ್ ಸೋಲು ಖಚಿತವಾಗುತ್ತಾ ಬಂತು. 14 ಬಾಲ್ ಗಳಲ್ಲಿ 20 ರನ್ ಗಳಿಸಿದ ರೋಡ್ಸ್ ಸಚಿನ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲ್ಲಿಸಿಬಿಟ್ಟರು. 17.2ನೇ ಓವರ್ ನಲ್ಲಿ ವಾರಿಯರ್ಸ್ ತಮ್ಮ ಗುರಿ ತಲುಪಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics