ಕ್ರೀಡೆ

ಸಚಿನ್, ಲಕ್ಷ್ಮಣ್, ಗಂಗೂಲಿ ಒಳಗೊಂಡ ಸಲಹಾ ಸಮಿತಿ ರದ್ದು?

Srinivasamurthy VN

ಮುಂಬೈ: ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರನ್ನು ಒಳಗೊಂಡ ಸಲಹಾ ಸಮಿತಿಯನ್ನು ಬಿಸಿಸಿಐ ರದ್ದುಗೊಳಿಸಲು  ನಿರ್ಧರಿಸಿದೆ ಎಂದು ಎಂದು ಮೂಲಗಳು ತಿಳಿಸಿವೆ.

ಮುಂಬೈನಲ್ಲಿ ಇಂದು ಬಿಸಿಸಿಐನ 85ನೇ ವಾರ್ಷಿಕ ಮಹಾಸಭೆ ನಡೆಯುತ್ತಿದ್ದು, ಕ್ರಿಕೆಟ್ ಬೆಳವಣಿಗೆಯ ನಿಟ್ಟಿನಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. 6 ತಿಂಗಳ  ಹಿಂದಷ್ಟೇ ಸಚಿನ್, ಲಕ್ಷ್ಮಣ್ ಮತ್ತು ಗಂಗೂಲಿ ನೇತೃತ್ವದಲ್ಲಿ ಸಲಹಾ ಸಮಿತಿ ರಚನೆ ಮಾಡಲಾಗಿತ್ತು. ಜಗಮೋಹನ್ ದಾಲ್ಮಿಯಾ ಅವರು ಬಿಸಿಸಐ ಅಧ್ಯಕ್ಷರಾಗಿದ್ದಾಗ ಈ ಸಲಹಾ  ಸಮಿತಿಯನ್ನು ರಚನೆ ಮಾಡಿದ್ದರು. ಈಗ ಅವರ ನಿಧನದ ಬಳಿಕ ಶಶಾಂಕ್ ಮನೋಹರ್ ಅವರು ಬಿಸಿಸಿಐ ನೇತೃತ್ವ ವಹಿಸಿದ್ದು, ಇದೀಗ ಈ ಸಮಿತಿಯನ್ನೇ ರದ್ದುಗೊಳಿಸಲು  ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಹಿತಾಸಕ್ತಿಯ ಸಂಘರ್ಷದ ಕಾರಣ ನೀಡಿ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಲಕ್ಷ್ಮಣ್ (ಸನ್ ರೈಸರ್ಸ್ ಹೈದರಾಬಾದ್) ಮತ್ತು ಸಚಿನ್ ತೆಂಡೂಲ್ಕರ್ (ಮುಂಬೈ  ಇಂಡಿಯನ್ಸ್) ಅವರು ಈಗಾಗಲೇ ಐಪಿಎಲ್ ತಂಡಗಳಲ್ಲಿ ಭಾಗಿಯಾಗಿದ್ದು, ಸೌರವ್ ಗಂಗೂಲಿ ಅವರು ಬಂಗಾಳ ಕ್ರಿಕೆಟ್ ಮಂಡಳಿಯ ನೇತೃತ್ವ ವಹಿಸಿದ್ದಾರೆ. ಆದರೆ ಬಿಸಿಸಿಐನ ಕಾನೂನಿ  ಪ್ರಕಾರ ಓರ್ವ ಸದಸ್ಯ ಒಂದು ಸ್ಥಾನಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಕಾರ್ಯ ನಿರ್ವಹಿಸುವಂತಿಲ್ಲ. ಹೀಗಾಗಿ ಈ ಮೂವರನ್ನು ಒಳಗೊಂಡ ಸಲಹಾ ಸಮಿತಿಯನ್ನೇ ರದ್ದುಗೊಳಿಸಲು ಬಿಸಿಸಿಐ  ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.

ತಾಂತ್ರಿಕ ಸಮಿತಿ ಅಧ್ಯಕ್ಷ ಸ್ಥಾನದಿಂದ ಕುಂಬ್ಳೆ ಔಟ್?
ಇದೇ ವೇಳೆ ತಾಂತ್ರಿಕ ಸಮಿತಿ ಅಧ್ಯಕ್ಷರಾಗಿದ್ದ ಅನಿಲ್ ಕುಂಬ್ಳೆ ಅವರನ್ನು ಕೂಡ ತೆರವುಗೊಳಿಸಲು ಬಿಸಿಸಿಐ ನಿರ್ಧರಿಸಿದ್ದು, ಅವರ ಸ್ಥಾನಕ್ಕೆ ಸೌರವ್ ಗಂಗೂಲಿ ಅವರನ್ನು ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20, ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡ ತೋರಿದ್ದ ಕಳಪೆ ಪ್ರದರ್ಶನ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರಮುಖವಾಗಿ ಕುಂಬ್ಳೆ ಅವರ ಪಾತ್ರದ ಕುರಿತಂತೆ ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಅವರು, ಅಸಂತುಷ್ಟಿಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಕುಂಬ್ಳೆ ಅವರನ್ನು ಬದಲಿಸಿ, ಅವರ ಸ್ಥಾನಕ್ಕೆ ಗಂಗೂಲಿ ಅವರನ್ನು ನೇಮಕ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ಐಸಿಸಿ ಅಧ್ಯಕ್ಷ ಸ್ಥಾನದಿಂದ ಶ್ರೀನಿವಾಸನ್ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ಅಲ್ಲದೆ ಬಿಸಿಸಿಐನಲ್ಲಿ ಅವರು ಹೊಂದಿದ್ದ ಎಲ್ಲ ಅಧಿಕಾರಿಗಳನ್ನು  ಕಸಿದುಕೊಳ್ಳಲಾಗಿತ್ತು. ಇನ್ನು ಟೀಂ ಇಂಡಿಯಾ ವ್ಯವಸ್ಥಾಪಕರಾಗಿರುವ ರವಿಶಾಸ್ತ್ರಿ ಅವರನ್ನು ಐಪಿಎಲ್ ಗವರ್ನಿಂಗ್ ಕಮಿಟಿಯಿಂದ ಮತ್ತು ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ರೋಜರ್  ಬಿನ್ನಿ ಅವರನ್ನು ಅವರ ಸ್ಥಾನದಿಂದ ಪದಚ್ಯುತಿಗೊಳಿಸಲಾಗಿತ್ತು.

SCROLL FOR NEXT