ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ತೀವ್ರ ಮುಖಭಂಗ ಅನುಭವಿಸಿದ್ದ ಬಿಸಿಸಿಐ ಐಪಿಎಲ್ ಗೆ ಮೇಜರ್ ಸರ್ಜರಿ ಮಾಡಿದ್ದು, ನೂತನ ಆಡಳಿತಾಧಿಕಾರಿಯಾಗಿ ರತ್ನಾಕರ ಶೆಟ್ಟಿ ನೇಮಕಗೊಂಡಿದ್ದಾರೆ.
ಈ ಹಿಂದಿನ ಆಡಳಿತಾಧಿಕಾರಿಯಾಗಿದ್ದ ಸುಂದರ್ ರಾಮನ್ ಅವರನ್ನು ಬಿಸಿಸಿಐ ಮುಖ್ಯಸ್ಥ ಶಶಾಂಕ್ ಮನೋಹರ್ ಅವರೇ ಹುದ್ದೆಯಿಂದ ಕೆಳಗಿಳಿಯುವಂತೆ ಸೂಚಿಸಿದ್ದರು. ಹಿತಾಸಕ್ತಿ ಸಂಘರ್ಷದ ಆಧಾರದ ಮೇಲೆ ಅವರನ್ನು ಐಪಿಎಲ್ ಆಡಳಿತಾಧಿಕಾರಿ ಹುದ್ದೆಯಿಂದ ಕೆಳಗಿಳಿಸಲು ಮುಂಬೈನಲ್ಲಿ ನಡೆದ 85ನೇ ವಾರ್ಷಿಕ ಮಹಾ ಸಭೆಯಲ್ಲಿ ನಿರ್ಧರಿಸಲಾಗಿತ್ತು. ರಾಮನ್ ಅವರು ಲಲಿತ್ ಮೋದಿ ಬಳಿಕ 2008ರಲ್ಲಿ ಐಪಿಎಲ್ ಆಡಳಿತಾಧಿಕಾರಿಯಾಗಿ ನೇಮಕವಾಗಿದ್ದರು. ಆ ಬಳಿಕ ಇವರ ಅಧೀನದಲ್ಲಿ ನಡೆದ ಐಪಿಎಲ್ ಸರಣಿಗಳು ವಿವಾದಕ್ಕೀಡಾಗಿದ್ದವು. 2013ರ ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದಾಗಿ ಸುಂದರ್ ರಾಮನ್ ಬಿಸಿಸಿಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದರು.
ಈ ಹಿಂದೆ ನಡೆದ ಹಲವು ಸಭೆಗಳಲ್ಲಿ ರಾಮನ್ ತಲೆದಂಡಕ್ಕೆ ಬಿಸಿಸಿಐ ಮುಂದಾಗಿತ್ತಾದರೂ, ತಮ್ಮ ಪ್ರಭಾವ ಬಳಿಸಿದ್ದ ರಾಮನ್ ಹುದ್ದೆಯಿಂದ ಕೆಳಗಿಳಿಯಲು ನಕಾರಾ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ನವೆಂಬರ್ 9 ರಂದು ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಸುಂದರ್ ರಾಮನ್ ಅವರ ರಾಜಿನಾಮೆ ಕೇಳಲಾಗಿತ್ತು. ಅದರಂತೆ ಸುಂದರ್ ರಾಮನ್ ತಮ್ಮ ಹುದ್ದೆಯಿಂದ ಕೆಳಗಿಳಿದ್ದರು. ತೆರವಾಗಿದ್ದ ಈ ಸ್ಥಾನಕ್ಕೆ ಇದೀಗ ರತ್ನಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.
ರತ್ನಾಕರ ಶೆಟ್ಟಿ ಅವರು ಹಿರಿಯ ಕ್ರಿಕೆಟ್ ನಿರ್ವಾಹಕರಾಗಿದ್ದು, ಸಾಕಷ್ಟು ವರ್ಷಗಳಿಂದ ಕ್ರಿಕೆಟ್ ಗೆ ತಮ್ಮ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಕ್ಲೀನ್ ಇಮೇಜ್ ಹೊಂದಿರುವ ರತ್ನಾಕರ ಶೆಟ್ಟಿ ಅವರನ್ನು ಐಪಿಎಲ್ ಆಡಳಿತ ಮಂಡಳಿಯ ಮುಖ್ಯಸ್ಥರನ್ನಾಗಿ ಮಾಡಿರುವುದು ಭ್ರಷ್ಟಾಚಾರ ಮುಕ್ತ ಕ್ರಿಕೆಟ್ ಸಹಕಾರಿಯಾಗಲಿದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.