ಬೆಂಗಳೂರು: ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದು, ಅವರ ಭವಿಷ್ಯದ ಕುರಿತು ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟ್ ತಾರೆ ಗುಂಡಪ್ಪ ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
"ನಿವೃತ್ತಿ ಎಂಬುದು ವೈಯಕ್ತಿಕ ನಿರ್ಧಾರ. ಅದನ್ನು ಯಾವುದೇ ಆಟಗಾರನ ಮೇಲೆ ಬಲವಂತವಾಗಿ ಹೇರಬಾರದು. ಅವರು ಭಾರತೀಯ ಕ್ರಿಕೆಟ್‍ಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಬಗ್ಗೆ ಮಿಕ್ಕವರಿಗಿಂತಲೂ ಅವರೇ ಚೆನ್ನಾಗಿ ಅರಿತಿದ್ದಾರೆ. ಬಿಸಿಸಿಐ ಹಾಗೂ ಆಯ್ಕೆಗಾರರು ಧೋನಿ ತಮ್ಮ ನಿರ್ಧಾರ ತೆಗೆದುಕೊಳ್ಳಲು ಉತ್ತಮ ಅವಕಾಶ ನೀಡುವ ವಿಶ್ವಾಸವಿದೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.