ಕ್ರೀಡೆ

ಇಂದು ಭಾರತ- ಆಸೀಸ್ ಕಾದಾಟ

Srinivas Rao BV

ನವದೆಹಲಿ: ವಿಶ್ವ ಹಾಕಿ ಲೀಗ್ ಫೈನಲ್ (ಎಚ್ ಡಬ್ಲ್ಯೂಎಲ್) ಪಂದ್ಯಾವಳಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ಮಹತ್ವದ ಟೂರ್ನಿಗಾಗಿ ಸನ್ನದ್ಧವಾಗುತ್ತಿರುವ ಭಾರತೀಯ ಪುರುಷರ ಹಾಕಿ ತಂಡ ಮತ್ತೊಮ್ಮೆ ಗಾಯದ ಸೆಳವಿಗೆ ಸಿಲುಕಿದೆ.
ಇದರ ಬೆನ್ನಿಗೇ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧದ ಮೂರು ಟೆಸ್ಟ್ ಸರಣಿಯ ಮೊದಲ ಪಂದ್ಯ ಗುರುವಾರ ಆರಂಭವಾಗುತ್ತಿದ್ದು, ಆತಿಥೇಯ ಭಾರತಕ್ಕೆ ಸವಾಲಾಗಲು ಪ್ರವಾಸಿ ಆಸ್ಟ್ರೇಲಿಯಾ ತಂಡ ಸನ್ನದ್ಧವಾಗಿದೆ. ಭರವಸೆಯ ಆಟಗಾರ ಲಲಿತ್, ಮೂಳೆ ಮುರಿತಕ್ಕೆ ಒಳಗಾಗಿದ್ದು ಟೂರ್ನಿಗಾಗಿ ಈಗಾಗಲೇ ಪ್ರಕಟಗೊಂಡಿದ್ದ 18 ಸದಸ್ಯರ ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಮೊಹಮ್ಮದ್ ಅಮೀರ್ ಖಾನ್ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ರಾಷ್ಟ್ರೀಯ ತಂಡದ ಅಭ್ಯಾಸ ಶಿಬಿರದ ವೇಳೆ ಅವರು ಗಾಯಗೊಂಡಿದ್ದರು. ಲಲಿತ್ ಉಪಾಧ್ಯಾಯ ಅವರ ಅನುಪಸ್ಥಿತಿಯ ಹೊರತಾಗಿಯೂ ಭಾರತ ತಂಡ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಹಾಕಿ ತಂಡದ ಮುಖ್ಯ ಕೋಚ್ ರೋಲೆಂಟ್ ಓಲ್ಟ್ಸ್ ಮನ್ ವ್ಯಕ್ತಪಡಿಸಿದ್ದಾರೆ. ``ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಭ್ಯಾಸ ಶಿಬಿರವು ಆಟಗಾರರ ಕೌಶಲ್ಯ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಶಿಬಿರದಲ್ಲಿ ಎಲ್ಲವೂ ನಾವಂದುಕೊಂಡಂತೆ ಸುಸೂತ್ರವಾಗಿ ನಡೆದರೂ, ಉಪಾಧ್ಯಾಯ ಅವರು ಮೂಳೆ ಮುರಿತಕ್ಕೊಳಗಾದದ್ದು ವಿಷಾದನೀಯ.
ಆದರೆ, ಅವರ ಸ್ಥಾನಕ್ಕೆ ಆಯ್ಕೆಯಾಗಿರುವ ಮೊಹಮ್ಮದ್ ಅಮಿರ್ ಖಾನ್, ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ'' ಎಂದು ತಿಳಿಸಿದ್ದಾರೆ. ``ವಿಶ್ವ ಹಾಕಿ ಲೀಗ್ ಫೈನಲ್ಸ್ ಟೂರ್ನಿಯಿಂದ ಈಗಾಗಲೇ ಕರ್ನಾಟಕದ ಆಟಗಾರ ನಿಕ್ಕಿನ್ ತಿಮ್ಮಯ್ಯ ಅವರನ್ನು ಕೈಬಿಡಲಾಗಿದ್ದು, ಇದೀಗ ಉಪಾಧ್ಯಾಯ ಅವರೂ ತಂಡದಿಂದ ಹೊರಗುಳಿದಿರುವುದು ತಂಡಕ್ಕೆ ಹೊರೆಯಾಗುವ ಸಾಧ್ಯತೆಗಳನ್ನು ಸೃಷ್ಟಿಸಿದೆ. ಇತ್ತೀಚೆಗೆ, ತಂಡ ಕೈಗೊಂಡಿದ್ದ ನ್ಯೂಜಿಲೆಂಡ್ ಪ್ರವಾಸದ ವೇಳೆ, ನಿಕ್ಕಿನ್ ಅವರು ಭುಜದ ನೋವಿಗೆ ಒಳಗಾಗಿದ್ದರು. ಈ ಇಬ್ಬರೂ ಪ್ರಮುಖ ಆಟಗಾರರ ಹೊರತಾಗಿಯೂ ಭಾರತ ತಂಡ, ಇತ್ತೀಚೆಗೆ ಆಸ್ಟ್ರೇಲಿಯಾ, ಜರ್ಮನಿ ಹಾಗೂ ಹಾಲೆಂಡ್ ವಿರುದ್ಧದ ಸೆಣಸಿ ಸಾಕಷ್ಟು ಅನುಭವಗಳನ್ನು
ಗಳಿಸಿದೆ. ಹಾಗಾಗಿ, ವಿಶ್ವ ಹಾಕಿ ಲೀಗ್ ಫೈನಲ್ಸ್ ಟೂರ್ನಿಯನ್ನು ಹಾಗೂ ಅದಕ್ಕೂ ಮುಂಚೆ ನಡೆಯಲಿರುವ ಆಸ್ಟ್ರೇಲಿಯಯಾ ವಿರುದ್ಧದ ಮೂರು ಪಂದ್ಯ ಟೆಸ್ಟ್ ಸರಣಿಯಲ್ಲಿಯೂ ಯಶ ಸಾಧಿಸುವ ವಿಶ್ವಾಸವಿದೆ'' ಎಂದು ತಿಳಿಸಿದರು.

SCROLL FOR NEXT