ಬೆಂಗಳೂರು: ಉದ್ಯಾನನಗರಿಯ ಬ್ಯಾಡ್ಮಿಂಟನ್ ಆಟಗಾರ ಅರವಿಂದ್ ಭಟ್, ಕೋಚಿಂಗ್ ಮೇಲೆ ಹೆಚ್ಚಿನ ಗಮನ ಹರಿಸುವ ಸಲುವಾಗಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಗುರುವಾರ ತಮ್ಮದೇ ವೈಟ್ ಪಿಕಾಕ್ ಅಕಾಡೆಮಿಯಲ್ಲಿ ತಮ್ಮ ನಿವೃತ್ತಿ ಘೋಷಿಸಿರುವ ಅರವಿಂದ್ ಭಟ್, ``ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಅವಕಾಶ ಲಭಿಸಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದೇನೆ'' ಎಂದು ತಿಳಿಸಿದರು. 36 ವರ್ಷದ ಅರವಿಂದ್ ಭಟ್ ಕಳೆದ ವರ್ಷ ನಡೆದ ಜರ್ಮನ್ ಓಪನ್ ಗ್ರಾಂಡ್ ಪ್ರಿಕ್ಸ್ ಗೋಲ್ಡ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಇದೇ ವರ್ಷ ಆ ಟೂರ್ನಿಯಲ್ಲಿ ಭಾಗವಹಿಸಿದ್ದರಾದರೂ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಆನಂತರ ಯಾವುದೇ ಟೂರ್ನಿಗಳಲ್ಲಿ ಅರವಿಂದ್ ಭಾಗವಹಿಸಿರಲಿಲ್ಲ.
``ಭಾರತೀಯ ಬ್ಯಾಡ್ಮಿಂಟನ್ ತಂಡದ ತರಬೇತುದಾರರ ಸಮಿತಿಯಲ್ಲಿ ಮಾರ್ಗದರ್ಶನ ನೀಡುವ ಅವಕಾಶ ಲಭಿಸಿದೆ. ಆ ಮೂಲಕ ನಾನು ದೇಶದ ಪ್ರಮುಖ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರ್ಗದರ್ಶನ ನೀಡಲಿದ್ದೇನೆ. 2005ರಲ್ಲಿ ನನ್ನ ಡಬಲ್ಸ್ ಜತೆಗಾರ ಶಿವಪ್ರಕಾಶ್ ಜತೆಗೆ ಈ ಅಕಾಡೆಮಿ ಆರಂಭಿಸಿದೆ. ಇಲ್ಲಿಯವರೆಗೂ ಶಿವಪ್ರಕಾಶ್ ಅಕಾಡೆಮಿಯನ್ನು ನೋಡಿಕೊಂಡಿದ್ದಾರೆ. ಇನ್ನು ಮುಂದೆ ಇದನ್ನು ಅಭಿವೃದ್ಧಿಗೊಳಿಸುವ ಯೋಚನೆ ಇದೆ'' ಎಂದು 3ರಿಂದ 4 ವರ್ಷಗಳ ಕಾಲ ಭಾರತದ ನಂಬರ್ ಒನ್ ಆಟಗಾರ ಎನಿಸಿಕೊಂಡಿದ್ದ ಅರವಿಂದ್ ಹೇಳಿದರು.