ನವದೆಹಲಿ: ಇಂಟರ್‍ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್)ನ ಫ್ರಾಂಚೈಸಿಯಾದ ಇಂಡಿಯನ್ ಏಸಸ್ ತಂಡದ ಸಹ ಮಾಲೀಕತ್ವದಿಂದ ಪ್ರತಿಷ್ಠಿತ ಇಲೆಕ್ಟ್ರಾನಿಕ್ಸ್ ಸಂಸ್ಥೆ ಮೈಕ್ರೋಮ್ಯಾಕ್ಸ್ ಹೊರಬಿದ್ದಿದೆ. ಆದರೆ, ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ಮುಂದುವರಿಸುವುದಾಗಿ ಕಂಪನಿ ಹೇಳಿ ಕೊಂಡಿದ್ದು, ಐಪಿಟಿಎಲ್ ದ್ವಿತೀಯ ಆವೃತ್ತಿ ಶುರುವಾಗಲು ಇನ್ನು ಕೆಲವೇ ದಿನ ಬಾಕಿಯಿರುವಾಗ ಮೈಕ್ರೋಮ್ಯಾಕ್ಸ್ ನ ಈ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ. ಏಸಸ್ ಫ್ರಾಂಚೈಸಿಯಲ್ಲಿ ಕಂಪೆನಿ ಶೇ. 60ರಷ್ಟು ಪಾಲುದಾರಿಕೆ ಹೊಂದಿದ್ದು, ಕಳೆದ ಆವೃತ್ತಿಯಲ್ಲಿ ಐಪಿಟಿಎಲ್‍ನಿಂದ ರು. 23.7 ಕೋಟಿ ನಷ್ಟ ಅನುಭವಿಸಿದ್ದು ಮೈಕ್ರೋ ಮ್ಯಾಕ್ಸ್ ಗೆ ಭಾರೀ ಹೊಡೆತ ನೀಡಿದ್ದು, ಇದರ ಹಿನ್ನೆಲೆಯಲ್ಲಿ ಫ್ರಾಂಚೈಸಿ ಪಾಲುದಾರಿಕೆಯಿಂದ ಅದು ಹಿಂದೆ ಸರಿಯಲು ಮುಂದಾಯಿತು ಎಂದು ಹೇಳಲಾಗಿದೆ.
ಟಿಕೆಟ್ ಬೆಲೆ 40 ಸಾವಿರ! ಇನ್ನು ಐಪಿಟಿಎಲ್‍ನ ದ್ವಿತೀಯ ಆವೃತ್ತಿಯ ಅಂಗವಾಗಿ, ದೆಹಲಿಯಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ಬೆಲೆ 4 ಸಾವಿರ ರು.ನಿಂದ 40 ಸಾವಿರ ರು.ವರೆಗೆ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. iptlworld.com ಅಥವಾ book my show ಜಾಲತಾಣದಲ್ಲಿ ಟಿಕೆಟ್‍ಗಳು ಲಭ್ಯವಾಗಲಿವೆ. ಪ್ರತಿಷ್ಠಿತ ಟೂರ್ನಿಯಲ್ಲಿ, ಇಂಡಿಯನ್ ಏಸಸ್, ಜಪಾನ್ ವಾರಿಯರ್ಸ್, ಫಿಲಿಪೈನ್ಸ್ ಮೇವರಿಕ್, ಸಿಂಗಪೂರ್ ಸ್ಲಾಮರ್ಸ್ ಹಾಗೂ ಯುಎಇ ರಾಯಲ್ಸ್ ತಂಡಗಳು ಪಾಲ್ಗೊಳ್ಳುತ್ತಿವೆ.