ದುಬೈ: ಬಹು ನಿರೀಕ್ಷಿತ ಹಾಗೂ ಪದೇ ಪದೇ ಮುಂದೂಡಲ್ಪಡುತ್ತಿದ್ದ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಹಾಗೂ ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಕೊನೆಗೂ ಪರಸ್ಪರ ಭೇಟಿಯಾಗಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಯ ಮುಖ್ಯ ಕಚೇರಿಯಲ್ಲಿ ಭಾನುವಾರ ರಾತ್ರಿ ಭೇಟಿಯಾದ ಈ ಇಬ್ಬರೂ ನಾಯಕರು, ನೆನೆಗುದಿಗೆ ಬಿದ್ದಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿಯ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ, ಪಾಕಿಸ್ತಾನ ಟಾಸ್ಕ್ ಫೋರ್ಸ್‍ನ ಅಧ್ಯಕ್ಷರೂ ಆಗಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಗಿಲ್ಸ್ ಕ್ಲಾರ್ಕ್, ಪಿಸಿಬಿ ಅಧಿಕಾರಿ ನಿಜಾಂ ಸೇಥಿ ಸಹ ಉಪಸ್ಥಿತರಿದ್ದರು.
ಇಬ್ಬರು ನಾಯಕರ ನಡುವೆ ನಡೆದ ಮಾತುಕತೆಯ ವಿವರಗಳನ್ನು ಬಹಿರಂಗಗೊಳಿಸಲಾಗಿಲ್ಲ. ಆದರೂ, ಸೇಥಿಯವರು ಈ ಬಗ್ಗೆ ಕೊಂಚ ಮಾಹಿತಿ ನೀಡಿದ್ದಾರೆ. ಟ್ವೀಟರ್‍ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಅವರು, "ಐಸಿಸಿ ಮುಖ್ಯಸ್ಥರೂ ಆಗಿರುವ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರಾದ ಶಹರ್ಯಾರ್ ಖಾನ್ ನಡುವಿನ ಭೇಟಿ ಫಲಪ್ರದವಾಗಿದೆ'' ಎಂದು ಹೇಳಿದ್ದಾರೆ. ಆದರೆ, ಇಲ್ಲೂ ಹೆಚ್ಚಿನ ವಿವರಗಳನ್ನು
ಅವರು ಹಂಚಿಕೊಂಡಿಲ್ಲ. ಆದರೆ, ``ಉಭಯ ದೇಶಗಳ ನಡುವಿನ ಸರಣಿ ಆರಂಭಕ್ಕೆ ತಡೆಯಾಗಿರುವ ಕೆಲವು ಕಗ್ಗಂಟುಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಪಾಕಿಸ್ತಾನ ಟಾಸ್ಕ್ ಫೋರ್ಸ್ ಅಧ್ಯಕ್ಷರಾದ ಕ್ಲಾರ್ಕ್ ಅವರಿಗೆ ನೀಡಲಾಗಿದೆ'' ಎಂದಿದ್ದಾರೆ.
ತಮ್ಮ ಈ ಚುಟುಕು ಉತ್ತರಕ್ಕೆ ಸಮರ್ಥನೆಯನ್ನೂ ನೀಡಿರುವ ಅವರು, ``ಸದ್ಯಕ್ಕೆ ನಾನು ಇಷ್ಟು ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಬಲ್ಲೆ. ಈ ವಿಚಾರದಲ್ಲಿ ಹೆಚ್ಚು ಮಾತನಾಡುವ ಪರಿಸ್ಥತಿಯಲ್ಲಿ ನಾನಿಲ್ಲ'' ಎಂದಷ್ಟೇ ಹೇಳಿದ್ದಾರೆ. ಡಿಸೆಂಬರ್‍ನಲ್ಲಿ ನಡೆಸಲು ಉದ್ದೇಶಿಸಿರುವ ಉಭಯ ದೇಶಗಳ ನಡುವಿನ ಸರಣಿಯನ್ನು ಭಾರತದಲ್ಲೇ ನಡೆಸಲು ಶಶಾಂಕ್ ನೇತೃತ್ವದ ಬಿಸಿಸಿಐ ಒಲವು ತೋರಿದ್ದು, ಇದು ಪಿಸಿಬಿಗೆ ಇರುಸು ಮುರುಸು ಉಂಟು ಮಾಡಿದೆ. ಇದೇ ವಿಚಾರವಾಗಿ, ಸರಣಿ ನೆನೆಗುದಿಗೆ ಬಿದ್ದಿದೆ. ಇದೀಗ, ಉಭಯ ನಾಯಕರ ಚರ್ಚೆಯಲ್ಲಿ ಇದೇ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಗಿದೆ ಎನ್ನಲಾಗಿದ್ದು, ಎರಡೂ ಕ್ರಿಕೆಟ್ ಮಂಡಳಿಗಳ ಮುಂದಿನ ನಡೆ ಏನು ಎಂಬುದು ಕುತೂಹಲಕರವಾಗಿದೆ.