ಕೋಲ್ಕತಾ: ಯಶಸ್ವಿಯಾದ ಬಾಂಗ್ಲಾದೇಶ ತಂಡ 19 ವರ್ಷದೊಳಗಿನವರ ತ್ರಿಕೋನ ಏಕದಿನ ಸರಣಿಯಲ್ಲಿ ಆಫ್ಘಾನಿಸ್ತಾನ ವಿರುದದ್ಧ ಜಯ ಸಾಧಿಸಿದೆ. ಬುಧವಾರ ಜಾಧವ್‍ಪುರ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 8 ವಿಕೆಟ್‍ಗಳ ಅಂತರದಲ್ಲಿ ಆಫ್ಘಾನಿಸ್ತಾನ ತಂಡವನ್ನು ಮಣಿಸಿದೆ. ಆ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದು, ಅಂತಿಮ ಸುತ್ತಿನಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಟಾಸ್ ಗೆದ್ದ ಆಫ್ಘಾನಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಂತರ 26.2 ಓವರ್ ಗಳಲ್ಲಿ 99 ರನ್ ಗಳಿಗೆ ಆಲೌಟ್ ಆಯಿತು.
ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ 24.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 101 ರನ್ ದಾಖಲಿಸಿತು. ಬಾಂಗ್ಲಾದೇಶದ ಪರ ನಜ್ಮುಲ್ ಹುಸೇನ್ ಶಾಂಟೊ ಅಜೇಯ 38 ಮತ್ತು ಮೆಹೆದಿ ಹಸನ್ ಮಿರಾಜ್ ಅಜೇಯ 37
ರನ್ ಗಳಿಸಿ ತಂಡವನ್ನು ಜಯದ ದಡ ಸೇರಿಸಿದರು .ಆಫ್ಘಾನಿಸ್ತಾನ ಪರ ರೆಹಮಾನ್ ಹಾಗೂ ತಾರೀಕ್ ತಲಾ 1 ವಿಕೆಟ್ ಪಡೆದರು. ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ್ದ ಆಫ್ಘಾನಿಸ್ತಾನ ತಂಡ, ಬಾಂಗ್ಲಾ ಬೌಲರ್ ದಾಳಿಗೆ ತತ್ತರಿಸಿತು. ಕೆಳ ಕ್ರಮಾಂಕದಲ್ಲಿ ತಾರಿಕ್ ಅವರ 27 ರನ್ ತಂಡದ ಪರ ಗರಿಷ್ಠ ಮೊತ್ತವಾಯಿತು. ಉಳಿದಂತೆ ಯಾವುದೇ ಬ್ಯಾಟ್ಸ್ ಮನ್ ನಿರೀಕ್ಷಿತ ಪ್ರದರ್ಶನ ನೀಡದ ಹಿನ್ನೆಲೆಯಲ್ಲಿ ಆಫ್ಘಾನಿಸ್ತಾನ ತಂಡ ಅಲ್ಪ ಮೊತ್ತಕ್ಕೆ ಕುಸಿಯಿತು. ಬಾಂಗ್ಲಾದೇಶದ ಪರ ಅಹ್ಮದ್ ಶಾವೊನ್, ಸಯೀದ್ ಸರ್ಕಾರ್ ತಲಾ 3, ಹಸನ್ ರಾಣಾ 2 ಮತ್ತು ಹಸನ್ ಮಿರಾಜ್ 1 ವಿಕೆಟ್ ಪಡೆದರು.