ನವದೆಹಲಿ: ಟೀಂ ಇಂಡಿಯಾ ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಇದೇ ಮೊದಲ ಬಾರಿಗೆ ವಿದೇಶಿ ಕಂಪನಿಯೊಂದರ ರಾಯಭಾರಿಯಾಗಲಿದ್ದಾರೆ.
ದುಬೈ ಮೂಲದ ಗ್ರ್ಯಾಂಡ್ ಮಿಡ್ವೆಸ್ಟ್ ಗ್ರೂಪ್ ಕಂಪನಿ ಧೋನಿ ಜತೆ ಮೂರು ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಕಂಪನಿ ಮತ್ತು ಧೋನಿ ನಡುವೆ ಬಹು ದಶಲಕ್ಷದ ಒಪ್ಪಂದ ಏರ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ದುಬೈ, ಯುನೈಟೆಡ್ ಕಿಂಗ್ ಡಂ ಮತ್ತು ಐರ್ಲೆಂಡ್ಗಳಲ್ಲಿ ಗ್ರ್ಯಾಂಡ್ ಮಿಡ್ವೆಸ್ಟ್ ಗ್ರೂಪ್ ಹೋಟೆಲ್ ಮತ್ತು ಈವೆಂಟ್ ಮ್ಯಾನೇಜ್ವೆುಂಟ್ ಸೇವೆಯನ್ನು ಒದಗಿಸುತ್ತಿದೆ. ಯುಎಇ ಉದ್ಯಮಿ ಜಾಫರ್ ಶಾನ್ ಖಾನ್ಗೆ ಸೇರಿದ ಈ ಕಂಪನಿ ಈಗಾಗಲೇ ದುಬೈನ ಸ್ಥಳೀಯ ಕ್ರಿಕೆಟ್ ತಂಡವೊಂದನ್ನು ಖರೀದಿಸಿದೆ.