ಮಕೌ: ಎರಡು ಬಾರಿ ಹಾಲಿ ಚಾಂಪಿಯನ್ ಭಾರತದ ಪಿ.ವಿ ಸಿಂಧು ತಮ್ಮ ಉತ್ತಮ ಪ್ರದರ್ಶನ ಮುಂದುವರಿಸುವ ಮೂಲಕ ಮಕೌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ 12ನೇ ರ್ಯಾಂಕಿಂಗ್‍ನ ಭಾರತದ ಪಿ.ವಿ ಸಿಂಧು 21-8, 15-21, 21-16 ಗೇಮ್ ಗಳ ಅಂತರದಲ್ಲಿ ಎರಡನೇ ಶ್ರೇಯಾಂಕಿತೆ ಜಪಾನ್‍ನ ಅಕನೆ ಯಮಗುಚಿ ವಿರುದ್ಧ ಜಯ ಸಾಧಿಸಿದರು. ಕಳೆದೆರಡು ಬಾರಿ ಚಾಂಪಿಯನ್ ಆಗಿರುವ ಪಿ.ವಿ ಸಿಂಧು, ಈ ಬಾರಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡುವತ್ತ ಗಮನ ಹರಿಸಿದ್ದಾರೆ.
ಪಂದ್ಯದ ಆರಂಭದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಿಂಧು, ಕೇವಲ 14 ನಿಮಿಷದಲ್ಲಿ ಮೊದಲ ಗೇಮ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ, ಎರಡನೇ ಗೇಮ್ ನಲ್ಲಿ ತಿರುಗಿ ಬಿದ್ದ ಜಪಾನ್ ಆಟಗಾರ್ತಿ, ಮೇಲುಗೈ ಸಾಧಿಸುವ ಮೂಲಕ ಸಿಂಧುಗೆ ಸವಾಲೆಸೆದರು. ಅಂತಿಮ ಗೇಮ್ ನಲ್ಲಿ ಮತ್ತೆ ತಮ್ಮ ನಿಯಂತ್ರಣ ಕಂಡುಕೊಂಡ ಸಿಂಧು 11-5 ಅಂತರದ ಮುನ್ನಡೆಯನ್ನು ಪಡೆದಿದ್ದರು. ಜಪಾನಿ ಆಟಗಾರ್ತಿ ಮತ್ತೆ ಹೋರಾಟ ನೀಡುವ ಪ್ರಯತ್ನ ನಡೆಸಿದರೂ, ಸಿಂಧು ಪಂದ್ಯವನ್ನು ಗೆದ್ದುಕೊಂಡರು.