ಕರಾಚಿ: ಉಭಯ ದೇಶಗಳ ಕ್ರಿಕೆಟ್ ಸರಣಿಯ ವಿಚಾರದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ)ಯೊಂದಿಗೆ ವ್ಯವಹರಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯು ಎಚ್ಚರಿಕೆಯಿಂದಿರಬೇಕು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಹೇಳಿದ್ದಾರೆ.
ಬಿಸಿಸಿಐ ಬಗ್ಗೆ ತೀಕ್ಷ್ಣವಾಗಿ ಮಾತನಾಡಿರುವ ಅವರು, 'ದ್ವಿಪಕ್ಷೀಯ ಸರಣಿ ವಿಚಾರದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯು ನಂಬಿಕೆಗೆ ಅರ್ಹವಾದುದಲ್ಲ' ಎಂದಿರುವ ಅವರು, 'ಸರಣಿಯನ್ನು ನಡೆಸುವುದಾಗಿ ಪಿಸಿಬಿ ತಾನು ಹಿಂದೆ ನೀಡಿದ್ದ ವಾಗ್ದಾನವನ್ನು ನಡೆಸುವುದು ಅನುಮಾನ'' ಎಂದು ಅವರು ಹೇಳಿದ್ದಾರೆ. ಅತ್ತ, ಪ್ಯಾರಿಸ್‍ನಲ್ಲಿ ನಡೆಯುತ್ತಿರುವ ಜಾಗತಿಕ ತಾಪಮಾನ ಶೃಂಗಸಭೆಯ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಇಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದು, ಉಭಯ ದೇಶಗಳ ಸರಣಿಗೆ ಭಾರತ ಸರ್ಕಾರದ ಒಪ್ಪಿಗೆ ಸಿಗುವ ಬಗ್ಗೆ ಆಸೆಯನ್ನು ಚಿಗುರಿಸಿದೆ. ಆದರೆ, ಇದರ ಬೆನ್ನಲ್ಲೇ ಜಾವೇದ್ ಮಿಯಾಂದಾದ್ ಅವರು ಸರಣಿ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
'ಭಾರತ ಪಾಕಿಸ್ತಾನ ವಿರುದ್ಧದ ಸರಣಿಗೆ ಸಮ್ಮತಿಸುವುದಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ, ಈ ವಿಚಾರದಲ್ಲಿ ಅವಸರಪಡದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಕಿವಿಮಾತು ಹೇಳಲಿಚ್ಛಿಸುತ್ತೇನೆ. ಸರಣಿಯ ಪ್ರಸ್ತಾಪದ ಆರಂಭದ ದಿನಗಳಿಂದಲೂ ಬಿಸಿಸಿಐ, ಪದೇ ಪದೇ ತನ್ನ ನಿಲುವುಗಳನ್ನು ಬದಲಿಸುತ್ತಿದೆ. ಸರಣಿ ಒಪ್ಪಂದಕ್ಕೆ ಪಿಸಿಬಿಯೊಂದಿಗೆ ಸಹಿ ಹಾಕಿದ್ದರೂ, ಯಾವುದೇ ನೆಪಗಳನ್ನು ಹುಡುಕುತ್ತಾ ಸರಣಿಯನ್ನು ಮುಂದೂಡುತ್ತಲೇ ಬಂದಿದೆ. ಹೀಗಿರುವಾಗ, ಬಿಸಿಸಿಐಯನ್ನು ನೆಚ್ಚಿಕೊಳ್ಳಲು ಆದೀತೇ ಎಂದಿದ್ದಾರೆ.