ಪುಣೆ: ಹಾಲಿ ಚಾಂಪಿಯನ್ ಕರ್ನಾಟಕಕ್ಕೆ ಈ ಋತುವಿನ ರಣಜಿ ಪಂದ್ಯಾವಳಿಯ ನೌಕೌಟ್ ಹಂತ ತಲುಪಲು ಕಡೆಯ ಸವಾಲು ಎದುರಾಗಿದ್ದು, ಮಂಗಳವಾರದಿಂದ ಶುರುವಾಗಲಿರುವ ಲೀಗ್ ಹಂತದ ಕೊನೇ ಪಂದ್ಯದಲ್ಲಿ ಅದು ಮಹಾರಾಷ್ಟ್ರ ವಿರುದ್ಧ ಕಾದಾಡಲು ಸಜ್ಜಾಗಿದೆ.
ಹುಬ್ಬಳ್ಳಿಯಲ್ಲಿ ನಡೆದ ಕಳೆದ ಪಂದ್ಯದಲ್ಲಿ ದೆಹಲಿ ವಿರುದ್ಧ ಉತ್ತಮ ಪ್ರದರ್ಶನ ನೀಡಿದರೂ, ಗೆಲುವು ಸಾಧಿಸಲು ಸಾಧ್ಯವಾಗದೆ ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ ಕೇವಲ 3 ಅಂಕಗಳಿಗೆ ತೃಪ್ತಿಪಟ್ಟಿತ್ತು. ನಿತೀಶ್ ರಾಣಾ ಮತ್ತು ಶೋರೆ ಭರ್ಜರಿ ಶತಕ ದಾಖಲಿಸಿ ಕರ್ನಾಟಕದ ಗೆಲುವಿನ ಕನಸನ್ನು ಹೊಸಕಿಹಾಕಿದ್ದರು. ಇದರಿಂದ ಬೋನಸ್ ಅಂಕದ ಗೆಲುವಿನ ಮೇಲೆ ಕಣ್ಣಿಟ್ಟಿದ್ದ ಕರ್ನಾಟಕಕ್ಕೆ ಭ್ರಮನಿರಸನವಾಗಿತ್ತು.
ಇನ್ನು 'ಎ' ಗುಂಪಿನಲ್ಲಿರುವ ಕರ್ನಾಟಕ 7 ಪಂದ್ಯಗಳಲ್ಲಿ 2 ಗೆಲುವು, 5ರಲ್ಲಿ ಡ್ರಾ ಸಾಧಿಸಿ 24 ಪಾಯಿಂಟ್ಸ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದರೆ, ದೆಹಲಿ, ಅಸ್ಸಾಂ, ಬಂಗಾಳ ತಲಾ 25 ಅಂಕ ಗಳಿಸಿ ಮೇಲಿನ ಮೂರು ಸ್ಥಾನಗಳಲ್ಲಿವೆ. ಉತ್ತಮ ರನ್‍ರೇಟ್ ಹೊಂದಿರುವ ದೆಹಲಿ ಅಗ್ರಸ್ಥಾನದಲ್ಲಿದೆ. ಪ್ರತೀ ಗುಂಪಿನಲ್ಲಿ ಮೊದಲೆರಡು ಸ್ಥಾನಗಳಿಸುವ ತಂಡಗಳು ನಾಕೌಟ್ ಹಂತ ತಲುಪುವ ಅವಕಾಶ ಪಡೆಯುವುದರಿಂದ ಕರ್ನಾಟಕಕ್ಕೆ ಈ ಮಹಾರಾಷ್ಟ್ರ ವಿರುದ್ಧದ ಪಂದ್ಯ ಅತ್ಯಂತ ಮಹತ್ವಪೂರ್ಣವೆನಿಸಿದೆ.
ಇನ್ನು ಮಹಾರಾಷ್ಟ್ರ ಕೂಡ ಇಲ್ಲೀವರೆಗೆ 7 ಪಂದ್ಯಗಳನ್ನಾಡಿದ್ದು, ಒಂದರಲ್ಲಿಯೂ ಅದು ಗೆಲುವು ಸಾಧಿಸಿಲ್ಲ. ರೋಹಿತ್ ಮೊತಾವನಿ ನಾಯಕತ್ವದ ಮಹಾರಾಷ್ಟ್ರ 2 ಪಂದ್ಯಗಳಲ್ಲಿ ಸೋಲನುಭವಿಸಿ 11 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಪ್ರಬಲವಾಗಿರುವ ಕರ್ನಾಟಕ ವಿರುದ್ಧ ಸರಿಸಾಟಿ ಪ್ರದರ್ಶನ ನೀಡಬೇಕಾದ ಒತ್ತಡ ಮಹಾರಾಷ್ಟ್ರ ತಂಡದ ಮೇಲಿದೆ.
ಕರ್ನಾಟಕದ ಬ್ಯಾಟಿಂಗ್ ಅಂತೂ ಸದೃಢ ಸ್ಥಿತಿಯಲ್ಲಿದ್ದು ಮಹಾರಾಷ್ಟ್ರ ವಿರುದ್ಧ ಭರ್ಜರಿ ಇನ್ನಿಂಗ್ಸ್ ಕಟ್ಟುವ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಅಮೋಘ ಶತಕ ದಾಖಲಿಸಿದ ರಾಬಿನ್ ಉತ್ತಪ್ಪ ಹಾಗೂ ಚೊಚ್ಚಲ ರಣಜಿ ಶತಕ ಪೂರೈಸಿದ ಮಯಾಂಕ್ ಅಗರ್ವಾಲ್ ಇದೇ ಆಕರ್ಷಕ ಬ್ಯಾಟಿಂಗ್ ನಡೆಸುವ ವಿಶ್ವಾಸದಲ್ಲಿದ್ದಾರೆ. ಏತನ್ಮಧ್ಯೆ ಆರ್. ಸಮರ್ಥ್, ಕರುಣ್ ನಾಯರ್ ಮತ್ತು ಮನೀಶ್ ಪಾಂಡೆಯಂಥವರು ಮಹಾರಾಷ್ಟ್ರ ಬೌಲರ್‍ಗಳನ್ನು ಕಾಡಲು ಮುಂದಾಗಿದ್ದಾರೆ.
ಇನ್ನು ಬೌಲಿಂಗ್‍ನಲ್ಲಿ ನಾಯಕ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಮತ್ತು ಎಚ್. ಎಸ್. ಶರತ್ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸುತ್ತಿದ್ದರೆ, ಲೆಗ್‍ಸ್ಪಿನ್ನರ್ ಶ್ರೇಯಸ್ ಗೋಪಾಲ್,
ಉದಿತ್ ಬಿ ಪಟೇಲ್ ಕೂಡ ಮಹಾರಾಷ್ಟ್ರ ತಂಡದ ಬ್ಯಾಟ್ಸ್‍ಮನ್‍ಗಳಿಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಒಟ್ಟಾರೆ ಹ್ಯಾಟ್ರಿಕ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ವಿನಯ್ ಪಡೆ ಈ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದೆ.