ಗುವಾಹಟಿ: ಮೇಲಿನ ಕ್ರಮಾಂಕಿತ ಆಟಗಾರ ಕೆಬಿ ಅರುಣ್ ಕಾರ್ತಿಕ್ ದಾಖಲಿಸಿದ ಅಜೇಯ ಶತಕದ ನೆರವಿನಿಂದ ಕರ್ನಾಟಕದ ವಿರುದ್ಧ ರಣಜಿ ಟ್ರೋಫಿ ಎ ಗುಂಪಿನ ಪಂದ್ಯದಲ್ಲಿ ಆತಿಥೇಯ ಅಸ್ಸಾಂ ಸೋಲು ತಪ್ಪಿಸಿಕೊಂಡರೆ, ಪಂದ್ಯಾವಳಿಯನ್ನು ಭರ್ಜರಿ ಗೆಲುವಿನೊಂದಿಗೆ ಆರಂಭಿಸುವ ಕನಸು ಹೊತ್ತಿದ್ದ ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ ತಂಡ ನಿರಾಸೆ ಅನುಭವಿಸಿತು.
ಗೆಲ್ಲಲು 388 ರನ್ ಗುರಿ ಪಡೆದಿದ್ದ ಅಸ್ಸಾಂ ಪಂದ್ಯದ ಮೂರನೇ ದಿನದಂದು 30 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಆಟದ ನಾಲ್ಕನೇ ಹಾಗೂ ಕೊನೆಯ ದಿನದಂದು ಕರ್ನಾಟಕ ಬೌಲರ್ ಗಳ ದಾಳಿಯನ್ನು ದಿಟ್ಟವಾಗಿ ನಿಭಾಯಿಸಿದ ಅರುಣ್ ಕಾರ್ತಿಕ್ ಪ್ರವಾಸಿ ತಂಡದ ಗೆಲುವಿನ ಆಸೆಗೆ ತಣ್ಣೀರು ಎರೆಚಿದರು. ಇದರಿಂದಾಗಿ ವಿನಯ್ ಕುಮಾರ್ ಪಡೆ 1 ಅಂಕ ಕಲೆಹಾಕಿದರೆ. ಅಸ್ಸಾಂ 3 ಅಂಕ ಬಾಚಿಕೊಂಡಿತು. ಕರ್ನಾಟಕ ರಣಜಿ ಪಂದ್ಯಾವಳಿಯ ತನ್ನ ಎರಡನೇ ಪಂದ್ಯದಲ್ಲಿ ಬಂಗಾಳವನ್ನು ಎದುರಿಸಲಿದ್ದು ಪಂದ್ಯ ಇದೇ 8 ರಿಂದ 11 ವರೆಗೆ ಬೆಂಗಳುರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜರುಗಲಿದೆ.
ಇತ್ತ ಸವಾಲಿನ ಗುರಿಯನ್ನು ಬೆನ್ನುಹತ್ತಿದ ಅಸ್ಸಾಂ ಆರಂಭದಲ್ಲಿ ಆತಂಕದ ಕ್ಷಣಗಳನ್ನು ಎದುರಿಸಿತಾದರೂ, ಕೊನೆಯ ದಿನದಂದು ಎಚ್ಚರಿಕೆಯ ಆಟವಾಡಿತು. ಆದಾಗ್ಯೂ 21 ರನ್ ಗಳಿಸಿ ಔಟಾಗದೆ ಉಳಿದಿದ್ದ ನೈಟ್ ವಾಚ್ ಮ್ಯಾನ್ ಪಲ್ಲವ್ ಕುಮಾರ್ ದಾಸ್(26 ) ವಿಕೆಟ್ ಅನ್ನು ಕರ್ನಾಟಕ ತ್ವರಿತಗತಿಯಲ್ಲೇ ಪಡೆದು ಗೆಲುವಿನತ್ತ ಸರಿದಿಸೆಯಲ್ಲಿಯೇ ಇಟ್ಟಿತು. ನಾಯಕ ವಿನಯ್ ಕುಮಾರ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಸಿಎಂ ಗೌತಮ್ ಗೆ ಕ್ಯಾಚಿತ್ತ ಪಲ್ಲವ್ ಪೆವಿಲಿಯನ್ನ್ ನಟ್ಟ ಹೆಜ್ಜೆ ಹಾಕಿದರು.
ಬಳಿಕ ಬಂದ ಸೈಯದ್ ಮೊಹಮದ್(21 ) ಇನ್ನಷ್ಟು ಜಿಗುಟುತನದ ಆಟದೊಂದಿಗೆ ಕಾರ್ತಿಕ್ ಜತೆಗೆ ಅಭೇದ್ಯ ಕೋಟೆಯಾಗಿ ನಿಂತದ್ದು ಅಸ್ಸಾಂ ಸೋಲಿನಿಂದ ಪಾರಾಗಲು ಕಾರಣವಾಯಿತು.