ನವದೆಹಲಿ: ಆರಂಭಿಕ ಪಂದ್ಯದಲ್ಲಿ ಸೋತ ನಂತರ ಪುಟಿದೆದ್ದ ಪ್ರವಾಸಿ ಭಾರತ, ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ತಿರುಗಿ ಬಿದ್ದಿರುವ ಭಾರತ ಹಾಕಿ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲವು ದಾಖಲಿಸಿದೆ.
ಬುಧವಾರ ಕ್ರೈಸ್ಟ್‍ಚರ್ಚ್‍ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 3-1 ಗೋಲುಗಳ ಅಂತರದಲ್ಲಿ ಕಿವೀಸ್ ಪಡೆಯನ್ನು ಮಣಿಸಿತು. ಆ ಮೂಲಕ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದ್ದು, ಮೂರನೇ ಪಂದ್ಯ ಇದೇ 9ರಂದು ನಡೆಯಲಿದೆ. ಭಾರತ ತಂಡದ ಪರ ರಮಣ್‍ದೀಪ್ ಸಿಂಗ್ (13ನೇ), ಲಲಿತ್ ಉಪಧ್ಯಾಯ (52ನೇ) ಹಾಗೂ ನಿಕಿನ್ ತಿಮ್ಮಯ್ಯ (60ನೇ) ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನು ನ್ಯೂಜಿಲೆಂಡ್ ತಂಡದ ಪರ ಕೇನ್ ರಸ್ಸೆಲ್ (45ನೇ) ಏಕೈಕ ಗೋಲು ದಾಖಲಿಸಿದರು.
ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸರ್ದಾರ್ ಪಡೆ, ಆತಿಥೇಯರಿಗೆ ಯಾವುದೇ ಅವಕಾಶ ನೀಡದಂತೆ ಸಂಘಟಿತ ದಾಳಿ ನಡೆಸಿತು. ಪರಿಣಾಮ ಪಂದ್ಯದ 13ನೇ ನಿಮಿಷದಲ್ಲಿ ಮೊದಲ ಗೋಲು ಲಭಿಸಿತು. ಬಿರೇಂದ್ರ ಲಕ್ರಾ ಅವರಿಂದ ಬಂದ ಚೆಂಡನ್ನು ರಮಣ್‍ದೀಪ್ ಸಿಂಗ್ ರಿಬೌಂಡ್ ಮೂಲಕ ಗೋಲು ದಾಖಲಿಸಿದರು. ಪಂದ್ಯದ 3ನೇ ಕ್ವಾರ್ಟರ್‍ನ ಅಂತ್ಯದಲ್ಲಿ ನ್ಯೂಜಿಲೆಂಡ್ ತಂಡದ ಕೇನ್ ರಸೆಲ್ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡು ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು. 52ನೇ ನಿಮಿಷದಲ್ಲಿ ಮನ್ ಪ್ರೀತ್ ಸಿಂಗ್ ಅವರ ಅತ್ಯುತ್ತಮ ಪಾಸ್ ಅನ್ನು ಲಲಿತ್ ಉಪಾಧ್ಯಯ ಬಳಸಿಕೊಂಡು ಗೋಲು ದಾಖಲಿಸಿದರು. ಪಂದ್ಯದ ಕೊನೆಯ ನಿಮಿಷದಲ್ಲಿ ಕರ್ನಾಟಕದ ಆಟಗಾರ ನಿಕ್ಕಿನ್ ತಿಮ್ಮಯ್ಯ ಗೋಲು ದಾಖಲಿಸಿ ತಂಡದ ಜಯದ ಅಂತರವನ್ನು ಹೆಚ್ಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics