ಕೊಚ್ಚಿ: ಜಂಟಲ್‍ಮನ್ಸ್ ಗೇಮ್ ಎಂದೇ ಖ್ಯಾತಿ ಪಡೆದಿರುವ ಕ್ರಿಕೆಟ್‍ಗೆ ಕಟಕ್‍ನಲ್ಲಿ ಪ್ರೇಕ್ಷಕರು ಅಪಮಾನಿಸಿದ್ದು, ಇಂತಹ ಘಟನೆಗಳು ಮರುಕಳಿಸಬಾರದು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.
''ಪ್ರವಾಸಿ ದ.ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದ ವೇಳೆ ನಡೆದ ಘಟನೆ ಕ್ರೀಡೆಗೆ ಹಿತವಾಗುವುದಿಲ್ಲ. ಈ ಹಿಂದೆಯೂ ಇಂತಹ ಘಟನೆ ನಡೆದಿದ್ದು, ಅದರಿಂದ ನಾವು ಪಾಠ ಕಲಿಯಬೇಕಿತ್ತು. ಕ್ರಿಕೆಟ್ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದೇವೆ. ಹಾಗಾಗಿ ಕೆಲವು ಬಾರಿ ನಿರಾಸೆ ಹಾಗೂ ಬೇಸರವಾಗುತ್ತದೆ. ಕೆಲವೊಮ್ಮೆ ಭಾವುಕರಾಗುತ್ತೇವೆ. ಹಾಗೆಂದು ಪ್ರೇಕ್ಷಕರು ಸಹನೆ ಕಳೆದುಕೊಳ್ಳಬಾರದು. ಈ ಘಟನೆ ಬಗ್ಗೆ ಪ್ರತಿಯೊಬ್ಬ ಅಭಿಮಾನಿಯೂ ಚಿಂತಿಸಬೇಕಿದೆ'' ಎಂದು ಸಚಿನ್ ಹೇಳಿದ್ದಾರೆ.
ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಅಹಿತಕಾರಿ ಘಟನೆಯ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವರದಿ ಕೇಳಿದೆ. ಭಾರತ ತಂಡದ ಪ್ರದರ್ಶನದಿಂದ ಕೋಪಗೊಂಡಿದ್ದ ಅಭಿಮಾನಿಗಳು ನೀರಿನ ಬಾಟೆಲ್‍ಗಳನ್ನು ಮೈದಾನಕ್ಕೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಹಾಗಾಗಿ ಪಂದ್ಯವನ್ನು ಎರಡು ಬಾರಿ ಸ್ಥಗಿತಗೊಳಿಸಲಾಗಿತ್ತು.
ಬಿಸಿಸಿಐನ ನೂತನ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಶಶಾಂಕ್ ಮನೋಹರ್ ಈ ಘಟನೆ ಕುರಿತಂತೆ ಎರಡು ದಿನಗಳಲ್ಲಿ ವಿವರಣೆ ನೀಡುವಂತೆ ಒಡಿಶಾ ಕ್ರಿಕೆಟ್ ಸಂಸ್ಥೆ ಗೌರವ ಕಾರ್ಯದರ್ಶಿ ಆಶೀರ್ವಾದ್ ಬೆಹೆರಾ ಅವರಿಗೆ ತಿಳಿಸಿದ್ದಾರೆ. ಅಲ್ಲದೆ ಐಸಿಸಿ ನಿಯಮಕ್ಕೆ ವಿರೋಧವಾಗಿ ಪ್ರೇಕ್ಷಕರು ನೀರಿನ ಬಾಟೆಲ್ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದೇಕೆ ಎಂದು ಸಹ ಪ್ರಶ್ನಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics