ಪುಣೆ: ಪಂದ್ಯದ ಆರಂಭದಿಂದ ಅಂತಿಮ ಹಂತದವರೆಗೂ ಆತಿಥೇಯರ ವಿರುದ್ಧ ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾದ ಡೆಲ್ಲಿ ಡೈನಮೋಸ್ ತಂಡ ಬುಧವಾರ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‍ಎಲ್) ಪಂದ್ಯಾವಳಿಯ 11ನೇ ಪಂದ್ಯದಲ್ಲಿ ಜಯದ ನಗೆಬೀರಿತು.
ಬುಧವಾರ ಶಿವ್ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್ 2-1 ಗೋಲುಗಳ ಅಂತರದಲ್ಲಿ ಪುಣೆ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿತು. ಆದಾಗ್ಯೂ ಈ ಸೋಲಿನ ಹೊರತಾಗಿಯೂ ಪುಣೆ ಎಫ್ ಸಿ ಎರಡನೇ ಸ್ಥಾನದಲ್ಲಿದೆ.
ಡೆಲ್ಲಿ ಡೈನಮೋಸ್ ತಂಡದ ಪರ ರಾಬಿನ್ ಸಿಂಗ್ (24 ನೇ), ರಿಚರ್ಡ್ ಗಾಡ್ಜೆ 90+7ನೇ ನಿಮಿಷದಲ್ಲಿ ತಲಾ ಒಂದೊಂದು ಗೋಲು ದಾಖಲಿಸಿದರು. ಎಫ್ ಸಿ ಪುಣೆ ಪರ ಕಾಲು ಉಚೇ 90+8 ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಪಂದ್ಯದ ಆರಂಭದಲ್ಲೇ ಚೆಂಡಿನ ಮೇಲೆ ಹೆಚ್ಚು ಹಿಡಿತ ಸಾಧಿಸಿದ ಡೆಲ್ಲಿ ಗೆ 24ನೇ ನಿಮಿಷದಲ್ಲಿ ಭಾರತದ ಸ್ಟ್ರೈಕರ್ ರಾಬಿನ್ ಸಿಂಗ್ ಅತ್ಯದ್ಭುತ ಹೆಡರ್ ಮೂಲಕ ಗೋಲು ಹೊಡೆದು ಮುನ್ನಡೆ ತಂದಿತ್ತರು.