ಜಹೀರ್ ಖಾನ್ 
ಕ್ರೀಡೆ

ಕ್ರಿಕೆಟ್‌ಗೆ ವಿದಾಯ ಹೇಳಿದ ಜಹೀರ್ ಖಾನ್ ಥ್ಯಾಂಕ್ಸ್ ಹೇಳಿದ್ದು ಹೀಗೆ

ಕ್ರಿಕೆಟ್ ಜೀವನದಲ್ಲಿ ಅತೀ ಕಷ್ಟವಾದ ಸಂಗತಿಯೆಂದರೆ ನೀವು ಆ ಆಟದಿಂದಲೇ ನಿವೃತ್ತಿ ಹೊಂದುವುದು. ಆಟವನ್ನು ಇನ್ನಷ್ಟು ಮುಂದುವರಿಸಬೇಕು ಎಂದಿದ್ದರೂ...

ವೇಗಿ ಜಹೀರ್ ಖಾನ್ ನಿನ್ನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ವೇಳೆ ಎಲ್ಲರಿಗೂ ಥ್ಯಾಂಕ್ಸ್  ಹೇಳಿದ ಜಹೀರ್ ಫೇಸ್‌ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಆ ಪೋಸ್ಟ್‌ನ ಪೂರ್ಣಪಾಠ ಇಲ್ಲಿದೆ.
ಇದು ಹೊಸ ಆರಂಭ..
ಕ್ರಿಕೆಟ್ ಜೀವನದಲ್ಲಿ ಅತೀ ಕಷ್ಟವಾದ ಸಂಗತಿಯೆಂದರೆ ನೀವು ಆ ಆಟದಿಂದಲೇ ನಿವೃತ್ತಿ ಹೊಂದುವುದು. ಆಟವನ್ನು ಇನ್ನಷ್ಟು ಮುಂದುವರಿಸಬೇಕು ಎಂದಿದ್ದರೂ, ಅಲ್ಲಿಯವರೆಗೆ ನಿಮಗೆ ಸಾಥ್ ನೀಡುತ್ತಿದ್ದ ನಿಮ್ಮ ಶರೀರ ಅದಕ್ಕೆ ವಿಸಮ್ಮತಿಸುತ್ತದೆ. ಮುಂದಿನ ಋತುವಿಗಾಗಿ ನಾನು ತರಬೇತಿ ಪಡೆಯುತ್ತಿದ್ದೆ. ಆದರೆ ನನ್ನ ಭುಜಗಳು ದಿನದಲ್ಲಿ 19 ಓವರ್ ಗಳನ್ನು ಎಸೆಯಲು ಸಮ್ಮತಿಸುತ್ತಿಲ್ಲ. ಆ ಹೊತ್ತಿಗೆ ನಾನು...
ಮತ್ತೇನೂ ಯೋಚಿಸಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಹೇಳಲು ತೀರ್ಮಾನಿಸಿದೆ. ದೇಶೀಯ ಪಂದ್ಯ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 9 ರಲ್ಲಿ ಆಡಿದ ನಂತರ ನಾನು ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಲು ಬಯಸುತ್ತೇನೆ.
ಶ್ರೀರಾಂಪುರ ಎಂಬ ಪುಟ್ಟ ನಗರವೊಂದರಲ್ಲಿ ಬೆಳೆದ ನಾನು ಬೌಲರ್ ಆಗಬೇಕೆಂಬ ಆಸೆಯಿಂದ ಇಂಜಿನಿಯರಿಂಗ್ ವೃತ್ತಿಯನ್ನು ಬಿಟ್ಟು ಬಿಟ್ಟಿದ್ದೆ. ನಾನು ಈವರೆಗೆ ತೆಗೆದು ಕೊಂಡ ಎಲ್ಲ ನಿರ್ಧಾರಗಳನ್ನು ನಮ್ಮ ಹೆತ್ತವರು ಒಪ್ಪಿದ್ದಾರೆ. ನಾನು ಬೌಲರ್ ಆಗಲು ತೀರ್ಮಾನಿಸಿದಾಗ ನನ್ನ ಅಪ್ಪ ಹೇಳಿದ್ದು...
"ಇಂಜಿನಿಯರ್‌ಗಳು ತುಂಬಾ ಜನರು ಇರ್ತಾರೆ. ನೀನು ಬೌಲರ್ ಆಗು" ಎಂದಾಗಿತ್ತು.
ನನ್ನ ವೃತ್ತಿ ಜೀವನದ ಆರಂಭದ ದಿನಗಳಾಗಿದ್ದವು ಅದು.  1996ರಲ್ಲಿ ಕ್ರಾಸ್ ಮೈದಾನ್‌ನಲ್ಲಿರುವ ನ್ಯಾಷನಲ್ ಕ್ರಿಕೆಟ್ ಕ್ಲಬ್  ಮುಂಬೈ ಅಂಡರ್ 19 ಟೀಂಗೆ ಕರೆ ಬಂದಿತ್ತ್ತು. ಅನಂತರ ಎಂಆರ್‌ಎಫ್ ಪೇಸ್ ಪೌಂಡೇಷನ್‌ನಲ್ಲಿ ನನ್ನ ತರಬೇತಿಯ ಕಷ್ಟದ ದಿನಗಳಾಗಿದ್ದವು.  ರಜಣಿ ಟ್ರೋಫಿ ಪಂದ್ಯದಲ್ಲಿ ಬರೋಡಾ ಪರವಾಗಿ ಮುಂಬೈ ತಂಡದ ವಿರುದ್ಧ ಪಂದ್ಯದಲ್ಲಿ ನಾನು ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದೆ.  ಪ್ರತಿಯೊಂದು ಆಟದಲ್ಲಿಯೂ ನಾನು ಕಲಿಯುತ್ತಲೇ ಹೋದೆ. ಒಬ್ಬ ಆಟಗಾರನಾಗಿ ನನ್ನಿಂದ ಸಾಧ್ಯವಾದಷ್ಟು ಪ್ರದರ್ಶನವನ್ನು ನೀಡಲು ನಾನು ಪ್ರಯತ್ನಪಟ್ಟೆ. ನನ್ನನ್ನು ಮತ್ತಷ್ಟು ಪಳಗಿಸಿಕೊಳ್ಳಲು ನಾನು ಆ ಸಮಯವನ್ನು ಬಳಸಿಕೊಂಡೆ.
2000ನೇ ಇಸ್ವಿಯಲ್ಲಿ ಭಾರತದ ಟೀಂನಲ್ಲಿ ಸ್ಥಾನ ಗಿಟ್ಟಿಸಿಕೊಂಡ ನಂತರ ಆಟದ ಗತಿ ಬದಲಾಯಿತು. ನನ್ನ ಕಷ್ಟದ ದಿನಗಳಲ್ಲಿ ಹಲವಾರು ಜನರು ನನ್ನ ಬೆಂಬಲಕ್ಕೆ ನಿಂತರು. ಟೀಂ ಇಂಡಿಯಾದಲ್ಲಿ ಸೇರ್ಪಡೆಯಾದ ನಂತರ ಹಲವಾರು ವಿಷಯಗಳನ್ನು ಕಲಿಯುವಂತಾಯಿತು.  ನಾನು ಹಲವಾರು ವಿಧದಲ್ಲಿ ಪ್ರದರ್ಶನ ನೀಡುವಾಗ ನನ್ನ ಕೋಚ್ ಗಳು, ತಂಡದ ನಾಯಕರು ನನಗೆ ಪ್ರೋತ್ಸಾಹ ನೀಡಿ ಮುನ್ನಡೆಯುಂತೆ ಬೆನ್ನು ತಟ್ಟಿದ್ದಾರೆ.
ನನ್ನ ಜೀವನದ ಅವಿಸ್ಮರಣೀಯ ಕ್ಷಣವೆಂದರೆ ವಿಶ್ವಕಪ್ ಗೆದ್ದಿದ್ದು. ನಾವು ಅಗ್ರ ತಂಡಗಳೊಂದಿಗೆ ಆಟವಾಡಿದ್ದು, ಆ ಆಟಗಳಲ್ಲಿ ಟೀಂ ಇಂಡಿಯಾದ ಸದಸ್ಯನಾಗಿ ಏಕದಿನ ಪಂದ್ಯಗಳಲ್ಲಿ ಮಿಂಚಿದ್ದು ಎಲ್ಲವೂ ನನ್ನ ಪುಣ್ಯ. ಹಲವಾರು ಕ್ರಿಕೆಟ್ ದಿಗ್ಗಜರ ಆಟಗಳನ್ನು ನೋಡುತ್ತಾ ಬೆಳೆದವನು ನಾನು. ಭಾರತ ಟೆಸ್ಟ್ ಮ್ಯಾಚ್ ಗಳಲ್ಲಿ ಗೆಲ್ಲುವಾಗ ಅದರ ಸಂತಸ ಏನೆಂಬುದನ್ನು ಅನುಭವಿಸಿದವನು ನಾನು. ಜಗತ್ತಿನ ನಂಬರ್ 1 ಕ್ರಿಕೆಟ್  ಟೀಂ ಎಂಬ ಪಟ್ಟಕ್ಕೇರುವ ಹಾದಿಯಲ್ಲಿ ನಾವು ಗೆದ್ದ ಪಂದ್ಯಗಳು, ಆ ಗೆಲುವಿನ ಖುಷಿಯನ್ನು ನಾನು ತುಂಬಾ ಇಷ್ಟಪಟ್ಟಿದ್ದೇನೆ.
ಬಿಸಿಸಿಐ, ಬರೋಡಾ ಕ್ರಿಕೆಟ್ ಅಸೋಸಿಯೇಷನ್, ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಸೇರಿದಂತೆ ನನಗೆ ಸಹಾಯ ಮಾಡಿದ, ಪ್ರೋತ್ಸಾಹ ನೀಡಿದ ಎಲ್ಲರಿಗೂ ನಾನು ಚಿರಋಣಿ. ಇಂಡಿಯನ್ ಕ್ರಿಕೆಟ್ ಟೀಂ, ಬರೋಡಾ, ಮುಂಬೈ,  ವರ್ಸೆಸ್ಟೆರ್‌ಶೈರ್ , ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೇರ್ ಡೆವಿಲ್ಸ್ ತಂಡಗಳ ಅಂಗವಾಗಿದ್ದಕ್ಕೆ ನಾನು ಋಣಿ.  
ಇದಲ್ಲದೆ ಕೆಲವು ವ್ಯಕ್ತಿಗಳಿಗೆ ನಾನು ಕೃತಜ್ಞತೆಗಳನ್ನು ಹೇಳಲೇ ಬೇಕಿದೆ. ನನ್ನ ಫಿಸಿಯೋ, ತರಬೇತುದಾರರು, ಸಪೋರ್ಟ್ ಸ್ಟಾಫ್, ಸಹೋದ್ಯೋಗಿಗಳು, ನಾಯಕರು, ಕೋಚ್‌ಗಳು, ಆಯ್ಕೆದಾರರು, ಹಿರಿಯ ಅಧಿಕಾರಿಗಳು, ವಿವಿಧ ಅಸೋಸಿಯೇಷನ್ ಗಳ ಅಧಿಕಾರಿಗಳು, ಗ್ರೌಂಡ್ಸ್ ಮೆನ್, ಟೀಂ ಮ್ಯಾನೇಜ್‌ಮೆಂಟ್ ಮತ್ತು ಟೀಂ ಮಾಲೀಕರಿಗೆ ನನ್ನ ಧನ್ಯವಾದಗಳು.  
ನನ್ನ ಕನಸುಗಳನ್ನು ನನಸಾಗಿಸಲು, ಪ್ರೋತ್ಸಾಹಿಸಿದ ಪ್ರತಿಯೊಬ್ಬ ವ್ಯಕ್ತಿಗೂ ನನ್ನ ಧನ್ಯವಾದಗಳು. ನನಗೆ ಸಹಾಯ ಮಾಡಿದವರ ಹೆಸರನ್ನು ಉಲ್ಲೇಖಿಸಲು ಬಿಟ್ಟು ಹೋಗಿದ್ದರೆ ಕ್ಷಮೆ ಇರಲಿ.
ಹಲವಾರು ವರ್ಷ ನನ್ನ ಜತೆಗಿದ್ದ ನನ್ನ ಸಹೋದ್ಯೋಗಿಗಳು, ಅವರೊಂದಿಗೆ ಡ್ರೆಸ್ಸಿಂಗ್ ರೂಂನಲ್ಲಿ ಮಾಡಿದ ತಮಾಷೆಗಳು..ಎಲ್ಲರೂ ನನಗೆ ಆಪ್ತ ಸ್ನೇಹಿತರು. ಅವರ ಸಹಕಾರದಿಂದ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ. 
ನನ್ನ ಕನಸುಗಳನ್ನು ನನಸಾಗಿಸಲು ನನ್ನ ಕುಟುಂಬ ಮಹತ್ತರ ಪಾತ್ರವನ್ನು ವಹಿಸಿದೆ. ನೀನು ಟೀಂ ಇಂಡಿಯಾ ಸೇರ್ಪಡೆಯಾಗುವುದರಲ್ಲಿ ನಿನ್ನ ಕನಸು ನನಸಾಗುವುದಿಲ್ಲ, ಪ್ರತಿಯೊಂದು ಆಟವೂ ಅವಿಸ್ಮರಣೀಯವಾಗುವಂತೆ ಮಾಡು ಎಂದು ನನ್ನ ದೊಡ್ಡಣ್ಣ ಜೀಶನ್ ಬೆನ್ನು ತಟ್ಟಿದ್ದರು. ನಾನು ವೃತ್ತಿ ಜೀವನದಲ್ಲಿ ಒತ್ತಡ ಅನುಭವಿಸದಂತೆ ನನ್ನ ಸಣ್ಣ ತಮ್ಮ ಅನೀಸ್ ನೋಡಿಕೊಂಡ್ಡದ್ದನು. ನಾನು ಆಟವಾಡುವುದನ್ನು ಲೈವ್ ಆಗಿ ಅವನೆಂದೂ ನೋಡಲಿಲ್ಲ, ಆದರೆ ನನ್ನನ್ನು ಸದಾ ಹುರಿದುಂಬಿಸುತ್ತಿದ್ದ.
ನನ್ನನ್ನು ಸದಾ ಪ್ರೀತಿಸಿದ, ಪ್ರೋತ್ಸಾಹಿಸಿದ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಸಲ್ಲುತ್ತವೆ. ನನ್ನ ವೃತ್ತಿಜೀವನದಲ್ಲಿ ನನ್ನ ಯಶಸ್ಸನ್ನು ಹೊಗಳಿದ, ನನ್ನನ್ನು ಟೀಕೆಗೊಳಪಡಿಸಿದ, ಪ್ರೋತ್ಸಾಹಿಸಿದ, ವಿಮರ್ಶಿಸಿದ ಮಾಧ್ಯಮ ಮಿತ್ರರಿಗೂ ನನ್ನ ಧನ್ಯವಾದಗಳು.
ಕ್ರಿಕೆಟ್ ನಿಂದಾಗಿ ಇಂದು ನಾನು ಗುರುತಿಸಿಕೊಂಡಿದ್ದೇನೆ. ಈ ಆಟದ ಮೂಲಕ ಹಲವಾರು ನೆನಪುಗಳನ್ನು ನನ್ನದಾಗಿಸಿಕೊಂಡಿದ್ದೇನೆ. ಹಲವಾರು ಸ್ನೇಹಿತರನ್ನು, ಪ್ರೀತಿ ಪ್ರೋತ್ಸಾಹವನ್ನು ಈ ಮೂಲಕ ಗಳಿಸಿಕೊಂಡಿದ್ದೇನೆ.
ನಾನು ನಿವೃತ್ತಿ ಹೊಂದುತ್ತಿದ್ದೇನೆ ಎಂದು ಹೇಳಿದಾಗ ನನ್ನ ಅಮ್ಮ ಹೇಳಿದ್ದು
ಆಯ್ತು, ನಿನ್ನ ವೃತ್ತಿ ಜೀವನದ ಪಯಣ ತುಂಬ ಚೆನ್ನಾಗಿತ್ತು.
ಮುಂದೊಂದು ದಿನ 'Zak is Back' ಎಂಬ ಶೀರ್ಷಿಕೆ  ಸುದ್ದಿ ಪತ್ರಿಕೆಯಲ್ಲಿ ಬಂದರೂ ಬರಬಹುದು. ಏತನ್ಮಧ್ಯೆ, ಶ್ರೀರಾಂಪುರದ ಹುಡುಗನೊಬ್ಬನ ಕನಸುಗಳನ್ನು ನನಸು ಮಾಡಲು ಅವಕಾಶ ಕೊಟ್ಟ ಈ ಆಟಕ್ಕೆ ನನ್ನ ಕೈಲಾದ ಕಾಣಿಕೆಯನ್ನು ನೀಡಲು ನಾನು ಸದಾ ಸಿದ್ಧನಿರುತ್ತೇನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!