ಎಫ್1 ದಂತಕತೆ ಮೈಕೆಲ್ ಶುಮಾಕರ್ ಇನ್ನೂ ಕೋಮಾದಿಂದ ಎದ್ದಿಲ್ಲ. 2013ರ ಡಿಸೆಂಬರ್‍ನಲ್ಲಿ ಫ್ರೆಂಚ್ ಆಲ್ಫ್ ಪರ್ವತದಲ್ಲಿ ಸ್ಕೀಯಿಂಗ್ ಮಾಡುವಾಗ ತಲೆಗೆ ಭಾರಿ ಪೆಟ್ಟು ಬಿದ್ದು, ಪ್ರಜ್ಞಾಶೂನ್ಯರಾಗಿದ್ದರು.
ಮೊದಲು ಫ್ರಾನ್ಸ್ ನ ಗ್ರೆನೋಬಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಫಲ ಕಾಣದೆ 6 ತಿಂಗಳ ನಂತರ ಸ್ವಿಜರ್ಲೆಂಡಿನ ಲಾಸನ್ನೆಯ ಯುನಿವರ್ಸಿಟಿ ಹಾಸ್ಪಿಟಲ್‍ಗೆ ಅಡ್ಮಿಟ್ ಮಾಡಲಾಯಿತು. ಈಗಲೂ ಈತನಿಗೆ ಟ್ರೀಟ್‍ಮೆಂಟ್ ನಡೆಯುತ್ತಲೇ ಇದೆ. ಅಂದಹಾಗೆ, ಶುಮಾಕರ್‍ಗೆ ಇದುವರೆಗೆ ಆದ ಒಟ್ಟು ಖರ್ಚು 97 ಕೋಟಿ ರುಪಾಯಿ!
ಹೌದು. ಶುಮಾಕರ್‍ಗೆ ಪ್ರತಿ ವಾರಕ್ಕೆ ಒಂದೂವರೆ ಕೋಟಿ ರುಪಾಯಿ ಖರ್ಚಾಗುತ್ತಿದೆಯಂತೆ. ಚಿಕಿತ್ಸೆ ನಡೆಯುತ್ತ 18 ತಿಂಗಳಾಯಿತು. ಈಗ ವೈದ್ಯರು ಹೇಳುವ ಪ್ರಕಾರ, 'ಶುಮಾಕರ್ ಮೊದಲಿಗಿಂತ ಪರ್ವಾಗಿಲ್ಲ. ಆದರೆ, ಪ್ರಜ್ಞಾವಸ್ಥೆಯಲ್ಲಿ ಅಂಥ ಬದಲಾವಣೆಯೇನೂ ಇಲ್ಲ'. ಅಂದಹಾಗೆ, ಶುಮಾಕರ್‍ಗೆ ಈಗ ಮನೆಯಲ್ಲೇ ಟ್ರೀಟ್ ಮೆಂಟ್ ನಡೆಯುತ್ತಿದೆ. ವಿಶ್ವದ ನುರಿತ ವೈದ್ಯರೆನಿಸಿಕೊಂಡ 16 ತಜ್ಞರು ಶುಮಾಕರ್‍ನ ಮೆದುಳಿನ ಆರೋಗ್ಯವನ್ನು ಗಮನಿಸಿದ್ದಾರಂತೆ. ನಾಲ್ಕು ವೈದ್ಯರು ನಿತ್ಯ ರಿಪೋರ್ಟ್ ತೆಗೆಯುತ್ತಿದ್ದಾರೆ. ಚಿಕಿತ್ಸೆ ನೀಡುತ್ತಲೇ ಇದ್ದಾರೆ. ಶುಮಿ ಬೇಗ ಚೇತರಿಸಿಕೊಳ್ಳಲಿಯೆಂಬುದು ಅಭಿಮಾನಿಗಳ ಹಾರೈಕೆ.