ರಾಜ್‍ಕೋಟ್: ನಾಯಕ ಎಂ.ಎಸ್ ಧೋನಿಯ ಧೀರೋಧ್ದಾತ್ತ ಆಟದಿಂದಾಗಿ ಪ್ರತಿಷ್ಠಿತ ಗಾಂಧೀಜಿ- ಮಂಡೇಲಾ ಸರಣಿಯಲ್ಲಿ ಸತತ ಮೂರು ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವಿನ ಸವಿಯುಂಡ ಭಾರತ ತಂಡ, ಭಾನುವಾರ ನಡೆಯಲಿರುವ ಮೂರನೇ ಏಕದಿನ ಪಂದ್ಯದಲ್ಲಿಯೂ ಗೆಲುವು ಸಾಧಿಸಿ 5 ಪಂದ್ ಸರಣಿಯಲ್ಲಿ 2-1 ಮುನ್ನಡೆ ಕಾಣುವ ವಿಶ್ವಾಸದಲ್ಲಿದೆ.
ಮೊದಲ ಎರಡು ಟಿ20 ಪಂದ್ಯ ಸರಣಿ ಹಾಗೂ ಆನಂತರದ ಮೊದಲ ಏಕದಿನ ಪಂದ್ಯದಲ್ಲಿಯೂ ಸೋತು ಜರ್ಜರಿತವಾಗಿದ್ದ ಭಾರತ ತಂಡಕ್ಕೆ ಇಂದೋರ್ ನಲ್ಲಿ ಸಿಕ್ಕ 22 ರನ್ ಗೆಲುವು ಹೊಸ ಹುರುಪು ತಂದದ್ದು ಒಂದೆಡೆ ಯಾದರೆ, 72 ದಿನಗಳ ಸುದೀರ್ಘ ಭಾರತ ಪ್ರವಾಸದಲ್ಲಿನ ಮೊಟ್ಟಮೊದಲ ಸೋಲು ಹರಿಣಗಳನ್ನು ಕೊಂಚ ಧೃತಿಗೆಡಿಸಿರುವುದು ಮತ್ತೊಂದು ಸುತ್ತಿನ ಪೈಪೋಟಿಗೆ ಎಡೆಮಾಡಿಕೊಟ್ಟಿದೆ.
ಕೆಣಕಿದ ಹೆಬ್ಬುಲಿಗಳಂತಾಗಿರುವ ದ.ಆಫ್ರಿಕನ್ನರು ಮೂರನೇ ಪಂದ್ಯದಲ್ಲಿ ತಿರುಗಿ ಬೀಳುವ ಸಂಕಲ್ಪ ತೊಟ್ಟಿದೆ. ಇನ್ನೊಂದೆಡೆ ಯಾವುದೇ ಕಾರಣಕ್ಕೂ ಗೆಲುವಿನ ಹಳಿಯಿಂದ ಆಚೆ ಸರಿಯದಿರಲು ಭಾರತ ಕೂಡ ನಿಶ್ಚಯಿಸಿದೆ. ಚುಟುಕು ಸರಣಿಯನ್ನು ಕಳೆದುಕೊಂಡ ನಂತರ ಎದುರಾದ ಟೀಕೆಗಳಿಂದ ವ್ಯಗ್ರಗೊಂಡಿದ್ದ ಧೋನಿ ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಭವ್ಯ ಜಯ ತಂದಿತ್ತಿದ್ದರು. ಇದು ತಂಡದ ಸೋಲಿನ ಸರಪಳಿಯನ್ನು ಕಳಚಿತ್ತಲ್ಲದೆ, ಕಳೆದುಕೊಂಡ ಆತ್ಮವಿಶ್ವಾಸವನ್ನೂ ಮರಳಿ ಪ್ರತಿಷ್ಠಾ ಪಿಸುವಲ್ಲಿ ಸಹಕಾರಿಯಾಯಿತು.
ಇಂದಿನ ಭಾರತದ ಬ್ಯಾಟಿಂಗ್ ಅಸ್ಥಿರತೆಯಿಂದ ಕೂಡಿರುವುದು ಕಳವಳಕಾರಿಯಾಗಿದೆ. ಪ್ರಮುಖವಾಗಿ ಉಪನಾಯಕ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಚಿಂತೆ ಹೆಚ್ಚಿಸಿದೆ. ಇತ್ತೀಚಿನ 12 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿ ಅರ್ದ ಶತಕ ಗೆರೆ ದಾಟದಿರುವುದು ಸ್ವತಃ ಕೊಹ್ಲಿಯ ಅಸಮಾಧಾನಕ್ಕೂ ಕಾರಣವಾಗಿದೆ. 2008ರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ಕಾಲಿಟ್ಟ ಕೊಹ್ಲಿ ಇತ್ತೀಚಿನ 12 ಪಂದ್ಯಗಳಲ್ಲಿ ಕೇವಲ 28.64ರ ಸರಾಸರಿ ಹೊಂದಿರುವುದು ತಂಡದ ಬ್ಯಾಟಿಂಗ್ ಶಕ್ತಿಗೆ ದೊಡ್ಡ ಹೊಡೆತ ನೀಡಿದೆ. ಇನ್ನುಳಿದಂತೆ ಶಿಖರ್ ಧವನ್, ಸುರೇಶ್ ರೈನಾ ಕೂಡ ಫಾರ್ಮ್ ಗೆ ಮರಳುವುದು ಅನಿವಾರ್ಯವಾಗಿದೆ. ಆದರೆ, ಬೌಲಿಂಗ್ ನಲ್ಲಿ ತಂಡ ಸುಧಾರಿತ ಪ್ರದರ್ಶನ ನೀಡಿದೆ. ಎರಡನೇ ಪಂದ್ಯದಲ್ಲಿ ಸ್ಪಿನ್ನರ್ ಗಳಿಲ್ಲದೇ ವೇಗಿ ಭುವನೇಶ್ವರ್ ಕುಮಾರ್ ಕೂಡ ಗಮನಾರ್ಹ ಪ್ರದರ್ಶನ ನೀಡಿದ್ದು ಹರಿಣಗಳ ದಾಹಕ್ಕೆ ಕಡಿವಾಣ ಹಾಕಿದೆ.
ಏತನ್ಮಧ್ಯೆ ಸ್ಫೋಟಕ ಭ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಸಾರಥ್ಯದ ದ. ಆಫ್ರಿಕಾ ಏಕದಿನ ಸರಣಿಯನ್ನೂ ಕೈವಶ ಮಾಡಿಕೊಳ್ಳುವ ಧಾವಂತದಲ್ಲಿದ್ದು,ಮೇಲುಗೈ ಸಾಧಿಸಲು ತಂತ್ರ ಹೆಣೆದಿದೆ. ಈ ದಿಸೆಯಲ್ಲಿ ಮೂರನೇ ಪಂದ್ಯವೂ ಉಭಯ ದೇಶಗಳ ಕ್ರಿಕೆಟ್ ಪ್ರೇಮಿಗಳ ಕುತೂಹಲ ಹೆಚ್ಚಿಸಿದೆ