ಮೈಸೂರು: ಪ್ರಸಕ್ತ ಸಾಲಿನ ರಣಜಿ ಪಂದ್ಯಾವಳಿಯ ಮೂರೂ ಸುತ್ತಿನ ಪಂದ್ಯಗಳಲ್ಲಿ ಗೆಲುವಿಗಾಗಿ ತಡಕಾಡುತ್ತಾ ಸಾಗಿರುವ ಆತಿಥೇಯ ಕರ್ನಾಟಕ,ಗುರುವಾರದಿಂದ ಶುರುವಾಗುತ್ತಿರುವ ನಾಲ್ಕನೇ ಸುತ್ತಿನಲ್ಲಿ ಪ್ರವಾಸಿ ಹರ್ಯಾಣ ತಂಡದೊಟ್ಟಿಗೆ ಕಾದಾಡುತ್ತಿದ್ದು, ಮತ್ತೊಮ್ಮೆ ಜಯಕ್ಕಾಗಿ ಹೋರಾಟ ಮುಂದುವರೆಸಲಿದೆ.ತನ್ನ 37ನೇ ಹುಟ್ಟುಹಬ್ಬದ ದಿನದಂದೇ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಹಾಗೂ ಐಪಿಎಲ್‍ಗೂ ವಿದಾಯ ಹೇಳಿರುವ ವೀರೇಂದ್ರ ಸೆಹ್ವಾಗ್ ಸಾರಥ್ಯದ ಹರ್ಯಾಣ ತಂಡದ ವಿರುದ್ಧ ವಿನಯ್ ಕುಮಾರ್ ಪಡೆ ಸೆಣಸಾಡುತ್ತಿದ್ದು, ಎಲ್ಲರ ಗಮನ ಸೆಹ್ವಾಗ್ ಮತ್ತು ರಾಹುಲ್ ಮೇಲೆ ನಾಟಿದೆ.
ಇಲ್ಲಿನ ಗಂಗೋತ್ರಿ ಗ್ಲೇಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ `ಎ' ಗುಂಪಿನ ಪಂದ್ಯವು ಕರ್ನಾಟಕದ ಪಾಲಿಗೆ ಮಹತ್ವವೆನಿಸಿದೆ. ಏಕೆಂದರೆ ಮೊದಲ ಪಂದ್ಯದಲ್ಲಿ ಅಸ್ಸಾಂ ಎದುರು ಇನ್ನಿಂಗ್ಸ್ ಹಿನ್ನಡೆ ಅನುಭವಿಸಿ ಕೇವಲ 1 ಅಂಕ ಪಡೆದ ಕರ್ನಾಟಕ, ತದನಂತರದ ಎರಡೂ ಪಂದ್ಯಗಳಲ್ಲಿಯೂ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಂಡು ಒಟ್ಟಾರೆ 7 ಅಂಕ ಗಳಿಸಿ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇತ್ತ ಹರ್ಯಾಣ ತಾನಾಡಿರುವ ಎರಡು ಪಂದ್ಯಗಳಲ್ಲಿ ಕಲೆಹಾಕಿರುವುದು ಕೇವಲ ಒಂದು ಅಂಕವಷ್ಟೆ. ಅದಕ್ಕೆ ತಕ್ಕಂತೆ ಅದು ಗುಂಪಿನಲ್ಲಿ ಕೊನೇ ಸ್ಥಾನದಲ್ಲಿದೆ.
ಇನ್ನು ಕರ್ನಾಟಕದ ಬ್ಯಾಟಿಂಗ್ ಅತ್ಯಂತ ಸಶಕ್ತವಾಗಿ ಕೂಡಿದ್ದರೂ, ನಿರ್ಣಾಯಕ ಹಂತದಲ್ಲಿ
ಬೌಲರ್‍ಗಳು ಮೊನಚು ಕಳೆದುಕೊಳ್ಳುತ್ತಿರುವುದು ತಂಡದ ಗೆಲುವಿನ ಬಯಕೆಯನ್ನು ಕೈಗೂಡಿಸದಂತಾಗಿದೆ. ಮೂರೂ ಪಂದ್ಯಗಳಲ್ಲಿ ತಂಡದ ಪ್ರಮುಖ ಬ್ಯಾಟ್ಸ್‍ಮನ್‍ಗಳು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
ಅದರಲ್ಲೂ ಕರುಣ್ ನಾಯರ್, ಆರ್.ಸಮರ್ಥ್, ಮನೀಶ್ ಪಾಂಡೆ ಹಾಗೂ ರಾಬಿನ್ ಉತ್ತಪ್ಪ ಬ್ಯಾಟಿಂಗ್‍ನಲ್ಲಿ ಸದ್ದು ಮಾಡಿದ್ದಾರೆ. ಆದರೆ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಕೆ.ಎಲ್. ರಾಹುಲ್ ವಿದರ್ಭ ವಿರುದ್ಧದ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಇನ್ನು ಬೌಲಿಂಗ್‍ನಲ್ಲಿ ವಿನಯ್ ಕುಮಾರ್, ಅಭಿಮನ್ಯು, ಮಿಥುನ್, ಜೆ.ಸುಚಿತ್ ಹಾಗೂ ಶ್ರೇಯಸ್ ಗೋಪಾಲ್ ಪ್ರದರ್ಶನ ಕಳಪೆದಾಯಕವಲ್ಲದೆ ಹೋದರೂ, ಪ್ರಮುಖ ಘಟ್ಟಗಳಲ್ಲಿ ಸಶಕ್ತ ಬೌಲಿಂಗ್ ಹೊರಹೊಮ್ಮದಿರುವುದು ತಂಡದ ಹಿನ್ನಡೆಗೆ ಕಾರಣವಾಗಿದೆ. ಈ ಮಧ್ಯೆ ದ.ಆಫ್ರಿಕಾ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಆಯ್ಕೆಯಾಗಿರುವ ಎಸ್. ಅರವಿಂದ್ ಅವರ ಸೇವೆಯೂ ಕರ್ನಾಟಕಕ್ಕೆ ಅಲಭ್ಯವಾಗಿದೆ. ಹೀಗಾಗಿ ಈ ಸಾಲಿನ ರಣಜಿ ಪಂದ್ಯಾವಳಿಯಲ್ಲಿ ಮೊದಲ ಗೆಲುವಿಗಾಗಿ ಹೋರಾಡುತ್ತಿರುವ ವಿನಯ್ ಪಡೆ ಅದನ್ನು ಸಾಕಾರಗೊಳಿಸಲು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಸಮತೋಲನದ ಪ್ರದರ್ಶನ ನೀಡಬೇಕಿದೆ.
ಏತನ್ಮಧ್ಯೆ ಪ್ರವಾಸಿ ಹರ್ಯಾಣ ತಂಡವು ನಾಯಕ ವಿರೇಂದ್ರ ಸೆಹ್ವಾಗ್ ಅವರ ನಾಯಕತ್ವದಲ್ಲಿ ಕರ್ನಾಟಕ ತಂಡವನ್ನು ಮಣಿಸುವ ವಿಶ್ವಾಸದಲ್ಲಿದೆ.ತಂಡದ ಬ್ಯಾಟಿಂಗ್‍ಗೆ ಸೆಹ್ವಾಗ್ ಪ್ರಬಲ ಶಕ್ತಿಯಂತಿದ್ದರೂ, ಮಿಕ್ಕವರಿಂದ ಇಂಥದ್ದೇ ಸ್ಪೋಟಕ ಆಟ ವ್ಯಕ್ತವಾಗುತ್ತದೆ ಎಂದು ಹೇಳಲಾಗದು. ಎಲ್ಲಕ್ಕಿಂತ ಮಿಗಿಲಾಗಿ ಸೆಹ್ವಾಗ್ ಕ್ರೀಸ್‍ನಲ್ಲಿ ಇದ್ದಷ್ಟು ಹೊತ್ತೂ ರನ್‍ಗಾಗಿ ಹರ್ಯಾಣ ಚಿಂತಿಸಬೇಕಿಲ್ಲ. ಆದರೆ, ಸೆಹ್ವಾಗ್ ಆಟದ ಶೈಲಿಯೇ ಮಾಡು ಇಲ್ಲವೇ ಮಡಿ ಎಂಬಂತಿರುವುದರಿಂದ ಅವರ ಮೇಲೆ ಹೆಚ್ಚು ಅವಲಂಬಿಸುವುದೂ ಕಷ್ಟ. ಆದರೆ ಹದಿನಾರು ವರ್ಷದ ಹಿಮಾಂಶು ರಾಣಾ ಕಳೆದ ಆರು ಇನ್ನಿಂಗ್ಸ್ ಗಳಲ್ಲಿ 278 ರನ್
ಕಲೆಹಾಕಿರುವುದು ಹರ್ಯಾಣದ ಬ್ಯಾಟಿಂಗ್‍ಗೆ ಕೊಂಚ ಮಟ್ಟಿನ ನಿರಾಳತೆಯನ್ನು ತರಿಸಿದೆ. ಇತ್ತ ಬೌಲಿಂಗ್‍ನಲ್ಲಿ ಹರ್ಷಲ್ ಪಟೇಲ್, ಜಯಂತ್ ಯಾದವ್ ಪರಿಣಾಮಕಾರಿ ದಾಳಿ ಸಂಘಟಿಸುತ್ತಿದ್ದು, ಕರ್ನಾಟಕದ ಬ್ಯಾಟ್ಸ್‍ಮನ್ ಗಳಿಗೆ ಸವಲಾಗಿ ಪರಿಣಮಿಸಲು ಸಜ್ಜಾಗಿದ್ದಾರೆ.