ಪ್ಯಾರಿಸ್: ಇತ್ತೀಚಿನ ಜಪಾನ್ ಮತ್ತು ಕೊರಿಯಾ ಓಪನ್ ನಲ್ಲಿ ನೀರಸ ಪ್ರದರ್ಶನ ನೀಡಿ ವಿಶ್ವದ ನಂ.1 ಸ್ಥಾನವನ್ನು ಕಳೆದು ಕೊಂಡ ಭಾರತದ ಅಗ್ರಕ್ರಮಾಂಕಿತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ಫೈನಲ್‍ನಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸೈನಾ ನೆಹ್ವಾಲ್ ತಮ್ಮ ಪ್ರತಿಸ್ಪರ್ಧಿ ಥಾಯ್ಲೆಂಡ್‍ನ ರಾಚನೊಕ್ ಇಟಾನನ್ ವಿರುದ್ಧ 9-21, 15-21 ಗೇಮ್ಗಳ ಅಂತರದಲ್ಲಿ ಪರಾಭವಗೊಂಡರು.
ಕೇವಲ 39 ನಿಮಿಷಗಳ ಆಟದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದ ಸೈನಾ ನಿರಾಸೆ ಅನುಭವಿಸಿದರು. ಇದಕ್ಕೂ ಮುನ್ನ ಗುರುವಾರ ಪ್ರೀ-ಕ್ವಾರ್ಟರ್ಫೈನಲ್‍ನಲ್ಲಿ ಜಪಾನ್‍ನ ಮಿನಾಟ್ಸು ಮಿಟಾನಿ ವಿರುದ್ಧ 21-19, 21-16ರಿಂದ ಜಯಿಸಿದ ಸೈನಾ, ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶ ಪಡೆದಿದ್ದರು.