ಕ್ರೀಡೆ

ಬಿಸಿಸಿಐ ಸುಧಾರಣೆಗೆ ಮೂಡದ ಒಮ್ಮತ

Srinivas Rao BV

ನವದೆಹಲಿ: ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್ ಪುನರಾಯ್ಕೆಯಾಗಿ ಬಂದ ನಂತರ ಮಂಡಳಿಯಲ್ಲಿ ಸಾಕಷ್ಟು ಸುಧಾರಣೆ ತರಲು ಕೆಲವೊಂದು ಕ್ರಮ ಕೈಗೊಳ್ಳಲು ಮುಂದಾಗಿರುವುದಕ್ಕೆ ಬಿಸಿಸಿಐನಲ್ಲೇ ಎರಡು ಬಣಗಳು ಕಾಣಿಸಿಕೊಂಡಿವೆ ಎಂಬ ಮಾತು ಕೇಳಿಬಂದಿದೆ.
ನವೆಂಬರ್ 9 ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಗೆ ಓಂಬುಡ್ಸ್ ಮನ್ ನೇಮಿಸಲು ನಿರ್ಧರಿಸಲಾಗಿದೆ. ಮಂಡಳಿಯಲ್ಲಿನ ಬದಲಾವಣೆಗಳಿಗೆ ಕೆಲ ಸದಸ್ಯರು ಬೆಂಬಲ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಪ್ರಸ್ತುತ ಕ್ರಮಗಳನ್ನೇ ಮುಂದುವರೆಸಿಕೊಂಡು ಹೋಗಲು ಆಗ್ರಹಿಸಿದ್ದಾರೆ ಎನ್ನಲಾಗಿದೆ. ಮಂಡಳಿಯ ನಿಯಮಾವಳಿಯನ್ನು ಯಾವುದೇ ಅಧಿಕಾರಿ ಉಲ್ಲಂಘಿಸಿದರೆ, ಸ್ವಹಿತಾಸಕ್ತಿ ಸಂಘರ್ಷದ ವಿಚಾರದಂಥ ವಿಷಯಗಳನ್ನು ನಿಭಾಯಿಸಲು ಈ ಒಂಬುಡ್ಸ್ ಮನ್ ನೇಮಿಸಲಾಗುತ್ತಿದೆ.
ಆದರೆ ಶಶಾಂಕ್ ಮನೋಹರ್ ಅವರ ಈ ಹೊಸ ಬದಲಾವಣೆಗಳಿಗೆ ಎಲ್ಲಾ ಸದಸ್ಯರು ಒಪ್ಪಿಗೆ ನೀಡಿಲ್ಲ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಕೆಲವು ಅಂಶಗಳ ಕುರಿತು ಚರ್ಚೆ ನಡೆಸಬೇಕಿದೆ. ಎಲ್ಲಾ ನಿರ್ಧಾರಗಳಿಗೂ ನಾವು ಸಮ್ಮತಿ ಸೂಚಿಸಿಲ್ಲ. ಸ್ವಹಿತಾಸಕ್ತಿ ಸಂಘರ್ಷ ವಿಚಾರವನ್ನು ನಿಭಾಯಿಸಲು ವೀಕ್ಷಕರನ್ನು ನೇಮಿಸುವುದು ಉತ್ತಮ ಬೆಳವಣಿಗೆ. ಆದರೆ ಇದರಲ್ಲಿ ಸಕಾರಾತ್ಮಕ ಹಾಗೂ ಋಣಾತ್ಮಕ ಅಂಶಗಳು ಒಳಗೊಂಡಿವೆ. ಯಾರು ಈ ಒಂಬುಡ್ಸ್ ಮನ್ ಸ್ಥಾನವನ್ನು ಅಲಂಕರಿಸುತ್ತಾರೆಯೋ ಅವರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವರೇ ಎಂಬುದು ತಿಳಿದಿಲ್ಲ. ಹಾಗಾಗಿ ಈ ವಿಚಾರದ ಕುರಿತು ಭಿನ್ನಾಭಿಪ್ರಾಯಗಳು ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಕೆಲ ಸದಸ್ಯರು ತಿಳಿಸಿದ್ದಾರೆ.

SCROLL FOR NEXT