ದುಬೈ: ಇಂಗ್ಲೆಂಡ್‍ನ ಪ್ರತಿಭಾನ್ವಿತ ಯುವ ಬ್ಯಾಟ್ಸ್‍ಮನ್ ಜೋ ರೂಟ್, ಮಂಗಳವಾರ ಬಿಡುಗಡೆಗೊಂಡ ಐಸಿಸಿ ಟೆಸ್ಟ್ ಬ್ಯಾಟ್ಸ್ ಮನ್ ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮರಳಿ ಪಡೆದಿದ್ದಾರೆ.
ಇದೇ ವರ್ಷ ಆಗಸ್ಟ್‍ನಲ್ಲಿ ಒಟ್ಟು 917 ಅಂಕಗಳ ಮೂಲಕ ಮೊದಲ ಸ್ಥಾನಕ್ಕೇರಿದ್ದ ಅವರು, ಇದೀಗ 913 ಅಂಕಗಳ ಮೂಲಕ ಪುನಃ ಅಗ್ರಜರಾಗಿದ್ದಾರೆ. ಇದಕ್ಕಿಂತಲೂ ವಿಶೇಷವೆಂದರೆ, ಕಳೆದ ವರ್ಷವಷ್ಟೇ ಅಂತಾರಾಷ್ಟ್ರೀಯ ಟೆಸ್ಟ್ ರಂಗಕ್ಕೆ ಪದಾರ್ಪಣೆ ಮಾಡಿದ್ದ ಪಾಕಿಸ್ತಾನದ ಸ್ಪಿನ್ನರ್ ಯಾಸಿರ್ ಶಾ ಟೆಸ್ಟ್ ಬೌಲರ್‍ಗಳ ಪಟ್ಟಿಯ ದ್ವಿತೀಯ ಸ್ಥಾನಕ್ಕೇರಿದ್ದು, ತಮ್ಮ ಪ್ರತಿಭಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ದುಬೈನಲ್ಲಿ ಇತ್ತೀಚೆಗೆ ನಡೆದ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 88 ಹಾಗೂ 71 ರನ್ ಬಾರಿಸಿದ್ದ ರೂಟ್, ಒಟ್ಟಾರೆಯಾಗಿ 913
ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನಕ್ಕೇರಿದ್ದು, ಅವರಿಗಿಂತ 3 ಅಂಕಗಳ ಹಿನ್ನಡೆ ಹೊಂದಿರುವ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ 2ನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಬ್ಯಾಟ್ಸ್‍ಮನ್‍ಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಯಾವುದೇ ದಾಂಡಿಗರು ಟಾಪ್ 10ರಲ್ಲಿಲ್ಲ. ವಿರಾಟ್ ಕೊಹ್ಲಿ (730) 13ನೇ ಸ್ಥಾನದಲ್ಲಿದ್ದರೆ, ಚೇತೇಶ್ವರ ಪೂಜಾರ (681) 20ನೇ ಸ್ಥಾನದಲ್ಲಿ, ಮುರಳಿ ವಿಜಯ್ (680) ಹಾಗೂ ಅಜಿಂಕ್ಯ ರಹಾನೆ (661) ಕ್ರಮವಾಗಿ 21 ಹಾಗೂ 22ನೇ ಸ್ಥಾನದಲ್ಲಿದ್ದಾರೆ. ಬೌಲರ್‍ಗಳ ಪಟ್ಟಿಯಲ್ಲಿ, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ (905) ಮೊದಲಿಗರಾಗಿದ್ದರೆ, ಇಂಗ್ಲೆಂಡ್‍ನ ಜೇಮ್ಸ್ ಆ್ಯಂಡರ್ಸನ್ (824), ಸ್ಟುವರ್ಟ್ ಬ್ರಾಡ್ (817) ಕ್ರಮವಾಗಿ 3ನೇ ಹಾಗೂ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಭಾರತದ ರವಿಚಂದ್ರನ್
ಅಶ್ವಿನ್ (760) 7ನೇ ಸ್ಥಾನದಲ್ಲಿದ್ದು, ಟಾಪ್ 10ರಲ್ಲಿರುವ ಏಕೈಕ ಭಾರತೀಯ ಬೌಲರ್ ಆಗಿದ್ದಾರೆ.