ಕ್ರೀಡೆ

ಹಾಲೆಪ್ ಮಣಿಸಿದ ಶರಪೋವಾ

Shilpa D

ಸಿಂಗಪುರ: ವಿಶ್ವದ 3ನೇ ಶ್ರೇಯಾಂಕಿತ ಟೆನಿಸ್ ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ಡಬ್ಲ್ಯೂಟಿಎ  ಫೈನಲ್ ಟೆನಿಸ್ ಟೂರ್ನಿಯ 4ನೇ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ.

ಮಂಗಳವಾರ ನಡೆದ ಮತ್ತೊಂದು 4ನೇ ಸುತ್ತಿನ ಪಂದ್ಯದಲ್ಲಿ ಇಟಲಿಯ  ಫ್ಲಾವಿಯಾ ಪೆನ್ನೆಟ್ಟಾ, ಪೋಲೆಂಡ್ ನ ಅಗ್ನಿಸ್ಕಾ ರಾಡ್ವಾಂಸ್ಕಾ ವಿರುದ್ದ ಜಯ ಪಡೆದರು.

ಸಿಂಗಪುರ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ರೊಮೇನಿಯಾದ ಹಾಲೆಪ್ ಅವರನ್ನು ಎದುರಿಸಿದ ಶರಪೋವಾ 6-4, 6-4 ಎರಡು ನೇರ ಸೆಟ್‍ಗಳ ಅಂತರದಲ್ಲಿ ಜಯ ಸಾಧಿಸಿದರು. ಪಂದ್ಯದ ಆರಂಭದಿಂದಲೂ ಉತ್ತಮ ಹಿಡಿತ ಸಾಧಿಸಿದ ಅವರು, ಪ್ರತಿ ಹಂತದಲ್ಲೂ ಹಾಲೆಪ್‍ಗೆ ಸವಾಲಾಗಿ ನಿಂತರು. ಅತ್ತ, ರೊಮೇನಿಯಾ ಆಟಗಾರ್ತಿ ಸಹ ಕೆಲ ಸಂದರ್ಭಗಳಲ್ಲಿ ಪ್ರತಿರೋಧ ತೋರಿದರಾದರೂ ರಷ್ಯಾ ಆಟಗಾರ್ತಿ ವಿರುದ್ಧ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ, ಜಯದ ಮಾಲೆ ಶರಪೋವಾ ಕೊರಳನ್ನೇ ಅಲಂಕರಿಸಿತು.

ಇದಕ್ಕೂ ಮುನ್ನ, ಮಧ್ಯಾಹ್ನ ನಡೆದಿದ್ದ ಮತ್ತೊಂದು ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ, ಮಿಂಚಿನ ಆಟವಾಡಿದ ಪೆನ್ನೆಟ್ಟಾ, 7-6 (5), 6-4 ಸೆಟ್‍ಗಳ ಅಂತರದಲ್ಲಿ  ಅಗ್ನೀಸ್ಕಾ  ರಾಡ್ವಾಂಸ್ಕಾ ವಿರುದ್ಧ ಜಯ ಸಾಧಿಸಿದರು. ಪಂದ್ಯದ ಮೊದಲ ಸೆಟ್ ಉತ್ತಮ ಪೈಪೋಟಿಯಿಂದ ಕೂಡಿತ್ತು. ಈರ್ವರ ಸಮಬಲದ ಹೋರಾಟದಿಂದಾಗಿ ಟೈ ಬ್ರೇಕರ್ ಗೆ ಜಾರಿದ ಪೆನ್ನೆಟ್ಟಾ ಅವರೇ ಜಯಶಾಲಿಯಾದರು. ಈ ಸಮಬಲದ ಹೋರಾಟ ಎರಡನೇ ಸೆಟ್‍ನಲ್ಲಿ ವ್ಯಕ್ತವಾಗಲಿಲ್ಲ.

SCROLL FOR NEXT