ಕ್ರೀಡೆ

ಅಕ್ಟೋಬರ್ 30ಕ್ಕೆ ವಾಂಖೆಡೆ ವಿವಾದ ವಿಚಾರಣೆ

Shilpa D

ಮುಂಬೈ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯದ ನಂತರ ಭುಗಿಲೆದ್ದಿರುವ ಪಿಚ್ ವಿವಾದದ ವಿಚಾರಣೆಯನ್ನು ಅ. 30ರಂದು ನಡೆಸಲು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ತೀರ್ಮಾನಿಸಿದೆ. ಅಂದು ನಡೆಯಲಿರುವ ಎಂಸಿಎ ವ್ಯವಸ್ಥಾಪಕ ಮಂಡಳಿ ಸಭೆಯಲ್ಲಿ ಈ ಪ್ರಕರಣ ಚರ್ಚೆಗೆ ಬರಲಿದೆ.

ವಾಂಖೆಡೆಯಲ್ಲಿ ಭಾನುವಾರ ನಡೆದಿದ್ದ ಐದನೇ ಏಕದಿನ ಪಂದ್ಯದಲ್ಲಿ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 214 ರನ್‍ಗಳ ಹೀನಾಯ ಸೋಲು ಕಂಡಿತ್ತು. ಇದರಿಂದ ಕುಪಿತರಾದ ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ, ಪಿಚ್ ಸಿದ್ಧಪಡಿಸಿದ್ದ ಸುಧೀರ್ ನಾಯಕ್ ಜತೆ ಜಗಳವಾಡಿದ್ದರು. ಈ ಹಿನ್ನೆಲೆಯಲ್ಲಿ, ನಾಯಕ್ ಅವರು ಶಾಸ್ತ್ರಿ ವಿರುದ್ಧ ಎಂಸಿಎ ಸಹ ಕಾರ್ಯದರ್ಶಿ ಪಿ.ವಿ. ಶೆಟ್ಟಿಯ ಅವರಲ್ಲಿ ದೂರು ಸಲ್ಲಿಸಿದ್ದರು. ಬಳಿಕ ಈ ದೂರು ಎಂಸಿಎ ಆಡಳಿತ ಮಂಡಳಿಗೆ ವರ್ಗಾಯಿಸಲ್ಪಟ್ಟಿತ್ತು.

ದೂರಿನಲ್ಲೇನಿದೆ?: ``ನಿಷ್ಪಕ್ಷಪಾತವಾಗಿರಬೇಕೆಂಬ ಉದ್ದೇಶದಿಂದ ಪ್ಲಾಟ್ ಪಿಚ್ ಅನ್ನು ತಯಾರಿಸಲಾಗಿತ್ತು. ಆದರೆ, ಪಂದ್ಯ ಶುರುವಾಗುವ ಕೆಲವೇ ಗಂಟೆಗಳ ಮುನ್ನ ಈ ಪಿಚ್ ಅನ್ನು ಸ್ಪಿನ್ ಸ್ನೇಹಿಯಾಗಿ ಪರಿವರ್ತಿಸಲು ರವಿಶಾಸ್ತ್ರಿ ಸೂಚಿಸಿದರು. ಆದರೆ ಆ ಘಳಿಗೆಯಲ್ಲಿ  ಪಿಚ್ ಅನ್ನು ಪುನಃ ಸಿದ್ಧಪಡಿಸುವುದು ಅಸಾಧ್ಯವಾಗಿದ್ದರಿಂದ ಫ್ಲ್ಯಾಟ್ ಪಿಚ್‍ನಲ್ಲೇ ಪಂದ್ಯ ನಡೆಯಿತು.  ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ  ಪಡೆ  ಇದು, ಭಾರತ ತಂಡದ ಹೀನಾಯ ಸೋಲಿಗೆ ಕಾರಣವಾಯಿತು.ಇದರಿಂದ, ಸಿಟ್ಟಿಗೆದ್ದ ರವಿಶಾಸ್ತ್ರಿ ತಮ್ಮನ್ನು ಅಸಂವಿಧಾನಿಕ ಪದಗಳಿಂದ ನಿಂದಿಸಿದ್ದಾರೆ" ಎಂದು ನಾಯಕ್ ಅಲವತ್ತುಕೊಂಡಿದ್ದಾರೆ.

ಮಹತ್ವ ಪಡೆದುಕೊಂಡ ವಿಚಾರಣೆ: ಶಾಸ್ತ್ರಿ ಹಾಗೂ ನಾಯಕ್ ನಡುವಿನ ವಾಗ್ಯುದ್ಧ ಪ್ರಕರಣವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದ್ದು, ಇದನ್ನು ಕೌಶಲ್ಯದಿಂದ ಬಗೆಹರಿಸಲಾಗು ವುದು ಎಂದು ಬಿಸಿಸಿಐ ಅಧ್ಯಕ್ಷ ತಿಳಿಸಿದ್ದಾರೆ.

ಇದೀಗ ಪ್ರಕರಣದ ವಿಚಾರಣೆಯನ್ನು ಎಂಸಿಎ ಕೈಗೆತ್ತಿಕೊಂಡಿರುವುದು ವಿಶೇಷವೆನಿಸಿದೆ. ಈ ವಿಚಾರಣೆಯ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ  ಸಹ ತನ್ನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

SCROLL FOR NEXT