ದುಬೈ: ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು ಟಾಪ್ 20 ಬ್ಯಾಟ್ಸ್ ಮ್ಯಾನ್ ಗಳ ಪಟ್ಟಿಯಲ್ಲಿ ಚೇತೇಶ್ವರ ಪೂಜಾರ ಸ್ಥಾನಪಡೆದಿದ್ದಾರೆ. ವೇಗಿ ಇಶಾಂತ್ ಶರ್ಮಾ ಟಾಪ್-20 ಬೌಲರ್ ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಕಳೆದ 22 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ಶ್ರೀಲಂಕ ವಿರುದ್ಧ ಟೆಸ್ಟ್ ಸರಣಿಯಲ್ಲಿ ಗೆಲುವು ದಾಖಲಿಸಿದ್ದು ಐಸಿಸಿ ಟೆಸ್ಟ್ ರ್ಯಾಂಕಿಂಗ್ ನ ಟಾಪ್ ಆಟಗಾರರ ಪಟ್ಟಿಯಲ್ಲಿ ಭಾರತದ ಆಟಗಾರರು ಸ್ಥಾನ ಪಡೆದಿದ್ದಾರೆ. ಚೇತೇಶ್ವರ್ ಪೂರಾಜ, ಟೆಸ್ಟ್ ಕ್ರಿಕೆಟ್ ಜೀವನದಲ್ಲಿ ಮೊದಲ ಬಾರಿಗೆ ಟಾಪ್-20 ರ ಪಟ್ಟಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ಚೇತೇಶ್ವರ್ ಪೂಜಾರ ಅವರಿಗೆ ಟಾಪ್-20 ಬ್ಯಾಟ್ಸ್ ಮ್ಯಾನ್ ಗಳ ಪಟ್ಟಿಗೆ ಸೇರ್ಪಡೆಯಾಗುವುದಕ್ಕೆ ನೆರವಾಗಿದೆ.ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ನಾಯಕ ವಿರಾಟ್ ಕೊಹ್ಲಿ ಟಾಪ್-10 ಬ್ಯಾಟ್ಸ್ ಮ್ಯಾನ್ ಗಳ ಪಟ್ಟಿಯಿಂದ ಕುಸಿದಿದ್ದು, ಈ ಪಟ್ಟಿಯಲ್ಲಿ ಭಾರತದ ಯಾವುದೇ ಆಟಗಾರರು ಇಲ್ಲದಂತಾಗಿದೆ.
ರೋಹಿತ್ ಶರ್ಮಾ 48 ನೇ ಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್ ಐದು ಸ್ಥಾನಗಳು ಮೇಲಕ್ಕೇರಿದ್ದು 50 ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕ ತಂಡದ ಆ್ಯಂಜೆಲೊ ಮ್ಯಾಥ್ಯೂಸ್ 5 ನೇ ರ್ಯಾಂಕಿಂಗ್ ನ್ನು ಉಳಿಸಿಕೊಂಡಿದ್ದಾರೆ.