ನ್ಯೂಯಾರ್ಕ್ : ಪ್ರತಿಷ್ಠಿತ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಮತ್ತೊಂದು ಅಚ್ಚರಿದಾಯಕ ಫಲಿತಾಂಶ ಹೊರಬಿದ್ದಿದ್ದು, 14 ಗ್ರಾಂಡ್‍ಸ್ಲಾಮ್ ಪ್ರಶಸ್ತಿಗಳ ಒಡೆಯ ರಾಫೆಲ್ ನಡಾಲ್ ನಿರ್ಗಮಿಸಿದ್ದರೆ, ದಾಖಲೆಯ 22ನೇ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಾಗಿ ನಡೆಯುತ್ತಿರುವ ತನ್ನ ಹೋರಾಟವನ್ನು ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಜೀವಂತವಾಗಿಟ್ಟುಕೊಂಡಿದ್ದಾರೆ.
ಶುಕ್ರವಾರ ತಡರಾತ್ರಿ ಇಲ್ಲಿನ ಆರ್ಥುರ್ ಆ್ಯಶ್ ಟೆನಿಸ್ ಕೋರ್ಟ್ ನಲ್ಲಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೂರನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಯುವ ಆಟಗಾರ ಹಾಗೂ ವಿಶ್ವದ 32ನೇ ಶ್ರೇಯಾಂಕಿತ ಫ್ಯಾಬಿಯೋ ಫಾಗ್ನಿನಿ 3-6, 4-6, 6-4, 6-3, 6-4ರ ಐದು ಸೆಟ್‍ಗಳ ಸೆಣಸಾಟದಲ್ಲಿ ನಡಾಲ್ ಸೋಲನುಭವಿಸಿದರು. ನಡಾಲ್ ವೃತ್ತಿಬದುಕಿನ ಕಳೆದೊಂದು ದಶಕದಲ್ಲೇ ಗ್ರಾಂಡ್ ಸ್ಲಾಮ್ ಟೂರ್ನಿಯೊಂದರ ಕ್ವಾರ್ಟರ್ ಫೈನಲ್ ಘಟ್ಟವನ್ನೂ ಮುಟ್ಟದೇ ಹೊರ ಬಿದ್ದದ್ದು ಇದೇ ಮೊದಸ ಬಾರಿಗೆ ಎನ್ನುವುದು ಗಮನೀಯ.
.
2005ರಲ್ಲಿ ನ್ಯೂಯಾರ್ಕ್‍ನ ಗಟ್ಟಿ ಅಂಕಣದ ಟೂರ್ನಿಯಲ್ಲಿ ಅಮೆರಿಕದ ಜೇಮ್ ಬ್ಲೇಕ್ ವಿರುದ್ಧ ಸೋತಿದ್ದು ಬಿಟ್ಟರೆ ಕಳೆದ ಹತ್ತು ವರ್ಷಗಳಲ್ಲಿ ಒಮ್ಮೆಯೂ ನಡಾಲ್ ಈ ಪರಿ ದಯನೀಯ ಸೋಲು ಕಂಡಿರಲಿಲ್ಲ.
ಎಲ್ಲಕ್ಕಿಂತ ಮಿಗಿಲಾಗಿ 29 ವರ್ಷದ ಈ ಎಡಗೈ ಆಟಗಾರ, ಗ್ರಾಂಡ್‍ಸ್ಲಾಮ್ ಟೂರ್ನಿಯ ಮೊದಲೆರಡು ಸೆಟ್‍ಗಳಲ್ಲಿ ಮುನ್ನಡೆ ಸಾಧಿಸಿದ ಬಳಿಕ ಸೋಲು ಕಂಡಿರಲೇ ಇಲ್ಲ. ಈ ಹಂತದಲ್ಲಿ ಅವರ ಸಾಧನೆ 151-0 ಎಂಬುದು ಕೂಡ ಮಹತ್ವದ್ದು. ಹಾಗಾಗಿ ನಡಾಲ್ ಪಾಲಿಗೆ ಇದೊಂದು ದುಃಸ್ವಪ್ನದಂತಿದೆ. ಮೊದಲೆರಡು ಸೆಟ್‍ಗಳಲ್ಲಿನ ಹಿನ್ನಡೆಯ ಮಧ್ಯೆಯೂ ಹೋರಾಟದ ಛಲ ಬಿಡದ 32ನೇ ಶ್ರೇಯಾಂಕಿತ ಆಟಗಾರ ಫಾಗ್ನಿನಿ, ಆತ್ಮವಿಶ್ವಾಸದ ಖನಿಯಂತೆ ಕಂಡುಬಂದರು. ಅದರ ಫಲವೇ ಆನಂತರ ದ ಮೂರೂ ಸೆಟ್‍ಗಳಲ್ಲಿ ನಡಾಲ್‍ಗೆ ಆಘಾತ ತರಿಸಿದ್ದು. ನಡಾಲ್ ವಿರುದ್ಧ ಎಷ್ಟರಮಟ್ಟಿಗೆ ಹಿಡಿತ ಸಾಧಿಸಿದರೆಂದರೆ, ನಾಲ್ಕು ಹಾಗೂ ಐದನೇ ಸೆಟ್ ಗಳಲ್ಲಿ ಸತತ ಏಳು ಸರ್ವೀಸ್ ಬ್ರೇಕ್‍ಗಳನ್ನು ಏರಿದ್ದು. ಜತೆಗೆ 70 ವಿನ್ನರ್‍ಗಳು ಅವರ ರ್ಯಾಕೆಟ್‍ನಿಂದ ಸಿಡಿದುಬಂದವು.
ಜೊಕೊವಿಚ್ ಗೆಲುವು: ವಿಶ್ವದ ನಂ.1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಚ್ ಯುಎಸ್ ಓಪನ್‍ನ ಪ್ರೀ-ಕ್ವಾರ್ಟರ್ ಫೈನಲ್‍ಗೆ ಲಗ್ಗೆ ಹಾಕಿದ್ದಾರೆ. ಶುಕ್ರವಾರ ನಡೆದ ಪುರುಷರ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಅವರು ಇಟಲಿ ಆಟಗಾರ ಆಂಡ್ರಿಯಾಸ್ ಸೆಪ್ಪಿ ವಿರುದ್ಧ 6-3, 7-5, 7-5 ನೇರ ಸೆಟ್‍ಗಳ ಅಂತರದಿಂದ ಜಯ ಪಡೆದರು. ಈ ಗೆಲುವಿನೊಂದಿಗೆ ಜೊಕೊವಿಚ್ ಇಟಲಿಯನ್ನರ ವಿರುದ್ಧ 30 ಗೆಲುವನ್ನು ಜೊಕೊವಿಚ್ ದಾಖಲಿಸಿದಂತಾಗಿದೆ. ಸೆರೆನಾ ಸಂಭ್ರಮ: ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಅಗ್ರಕ್ರಮಾಂಕಿತ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಟೂರ್ನಿಯಲ್ಲಿ ಎರಡನೇ ಬಾರಿಗೆ ತಿಣುಕಿದರೂ, ಹೋರಾಟದ ದಿಟ್ಟತೆಯನ್ನೇನೂ ಬಿಟ್ಟುಕೊಡದೆ ಮುಂದುವರೆದಿದ್ದಾರೆ. ಪ್ರೀಕ್ವಾರ್ಟರ್ ಫೈನಲ್‍ಗಾಗಿನ ಕಾದಾಟದಲ್ಲಿ ಅಮೆರಿಕದವರೇ ಆದ ಬೆಥಾನಿ ಮಾಟೆಕ್ ಸ್ಯಾಂಡ್ಸ್ ಎದುರು ಮೊದಲ ಸೆಟ್‍ನಲ್ಲಿನ ಹಿನ್ನಡೆಯ ಹೊರತಾಗಿಯೂ ಅಂತಿಮವಾಗಿ 3-6, 7-5, 6-0 ಸೆಟ್‍ಗಳಿಂದ ಸೆರೆನಾ ವಿಜಯಿಯಾಗಿ ಅಂತಿಮ ಹದಿನಾರರ ಘಟ್ಟ ತಲುಪಿದರು.
ಕ್ವಿಟೋವಾ ಮುಂದಡಿ: ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‍ನಲ್ಲಿ 5ನೇ ಶ್ರೇಯಾಂಕಿತ ಪೆಟ್ರಾ ಕ್ವಿಟೋವಾ 6-2, 6-1 ಸೆಟ್‍ಗಳಿಂದ ಅನಾ ಕ್ಯಾರೋಲಿನಾ ಅವರನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ. ಭಾರತಕ್ಕೆ ಮಿಶ್ರಫಲ: ಏತನ್ಮಧ್ಯೆ ಅಮೆರಿಕ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಭಾರತ ಮಿಶ್ರ ಫಲವನ್ನ ಅನುಭವಿಸಿದೆ. ಸಾನಿಯಾ ಮಿರ್ಜಾ ಅವರ ಮಿಶ್ರ ಡಬಲ್ಸ್ ಹೋರಾಟಕ್ಕೆ ತೆರೆಬಿದ್ದಿದೆ. ಬ್ರೆಜಿಲ್‍ನ ಬ್ರೂನೊ ಸೊರೆಸ್ ಹಾಗೂ ಸಾನಿಯಾ ಜೋಡಿ ಶುಕ್ರವಾರ ನಡೆದ ಆರಂಭಿಕ ಸುತ್ತಿನಲ್ಲೇ ಜೆಕ್ ರಿಪಬ್ಲಿಕ್‍ನ ಆಂಡ್ರಿಯಾ ಹವಕೋವಾ ಹಾಗೂ ಪೊಲೆಂಡ್ ನ ಲೂಕಾಸ್ ಕ್ಯುಬೊಟ್ ಜೋಡಿಯ ಎದುರು 3-6, 3-6ರ ಎರಡು ನೇರ ಸೆಟ್‍ಗಳ ಆಟದಲ್ಲಿ ಸೋಲುಂಡಿತು. ಇನ್ನು ಶನಿವಾರ ನಡೆದ ಮಹಿಳೆಯರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿಯು ಟಿಮಿಯಾ ಬಾಸ್ಕಿಂಸ್ಕಿ ಮತ್ತು ಜಾಯ್ ಚುಂಗ್ ಚಾವ್ ಜೋಡಿಯನ್ನು 6-1, 6-1 ಸೆಟ್ ಗಳ ಅಂತರದಲ್ಲಿ ಮಣಿಸಿ ಮೂರನೇ ಸುತ್ತಿಗೆ ಪ್ರವೇಶಿಸಿದೆ. ಇತ್ತ ಮಿಶ್ರ ಡಬಲ್ಸ್‍ನ ಮತ್ತೊಂದು ಪಂದ್ಯದಲ್ಲಿ ಲಿಯಾಂಡರ್ ಪೇಸ್ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಜಯದ ಅಭಿಯಾನ ಮುಂದುವರೆಸಿದೆ. ನಾಲ್ಕನೇ ಶ್ರೇಯಾಂಕಿತ ಜೋಡಿ ಪೇಸ್ ಹಾಗೂ ಹಿಂಗಿಸ್, ಎರಡನೇ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಕ್ಲಾರಿ ಲಿಯು ಟೇಲರ್ ಹಾಗೂ ಹ್ಯಾರಿ ಫಿಟ್ಜ್ ವಿರುದ್ಧ 6-2, 6-2ರ ಎರಡು ನೇರ ಸೆಟ್‍ಗಳಲ್ಲಿ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ಮಿಶ್ರ ಡಬಲ್ಸ್‍ನ ಮತ್ತೊಂದು ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ಅವರ ಜತೆಯಾಟಗಾತಿರ್ ಯಂಗ್-ಜಾನ್ ಚಾನ್ ಜೋಡಿ 2ನೇ ಸುತ್ತಿಗೆ ಪ್ರವೇಶಿಸುವಲ್ಲಿ ಸಫಲವಾಯಿತು. ಮೊದಲ ಸುತ್ತಿನ ಪಂದ್ಯದಲ್ಲಿ ಬೋಪಣ್ಣ ಹಾಗೂ ಮರ್ಗಿಯಾ ಜೋಡಿ ಸ್ಪೇನ್‍ನ ಅರ್ನಾಂಡೊ ವೆರ್ಡಾಸ್ಕೊ ಹಾಗೂ ಸ್ವಿಡ್ಜರ್‍ಲೆಂಡ್‍ನ ಬೆಲಿಂಡಾ ಬೆನ್ಸಿಕ್ ಎದುರು 6-4, 6-4 ಸೆಟ್‍ಗಳಲ್ಲಿ ಜಯಿಸಿತು.