ಬೆಂಗಳೂರು: ಏಷ್ಯಾದ ಅತಿ ಪ್ರಬಲ ಫುಟ್ಬಾಲ್ ತಂಡವೆಂದೇ ಕರೆಸಿಕೊಳ್ಳುವ ಇರಾನ್ ಹಾಗೂ ಆತಿಥೇಯ ಭಾರತ ತಂಡದ ನಡುವೆ ನಡೆಯಲಿರುವ 2018ರ ವಿಶ್ವಕಪ್ ಫುಟ್ಬಾಲ್ ಅರ್ಹತಾ ಟೂರ್ನಿಯ ಎರಡನೇ ಸುತ್ತಿನ `ಡಿ' ಗುಂಪಿನ ಪಂದ್ಯವು ನಡೆಯಲಿದ್ದು, ಬಲಿಷ್ಠ ಇರಾನ್ ಗೆ ದಿಟ್ಟ ಪೈಪೋಟಿ ನೀಡಲು ಭಾರತ ತಂಡ ಸನ್ನದ್ಧವಾಗಿದೆ.
ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಇರಾನ್ ನಿಸ್ಸಂಶಯವಾಗಿಯೂ ಫೇವರಿಟ್ ಹಣೆಪಟ್ಟಿ ಕಟ್ಟಿಕೊಂಡಿದ್ದರೂ, ಛೆಟ್ರಿ ಪಡೆ ಸವಾಲೊಡ್ಡಲು ನಿರ್ಧರಿಸಿದ್ದು ಪಂದ್ಯ ಕೌತುಕ ಕೆರಳಿಸಿದೆ. ಫೀಫಾ ರ್ಯಾಂಕಿಂಗ್ ಪಟ್ಟಿಯಲ್ಲಿ ಇರಾನ್ 40ನೇ ಸ್ಥಾನದಲ್ಲಿದ್ದರೆ, ಭಾರತದ್ದು 155ನೇ ಶ್ರೇಯಾಂಕ. ಇದು ಇತ್ತಂಡಗಳ ಅಜಗಜಾಂತರ ವ್ಯತ್ಯಾಸಕ್ಕೆ ಸಾಕ್ಷಿಯಂತಿದ್ದರೂ, ಭಾರತ ತಂಡ ಇರಾನ್ ಗೆ ಪ್ರಬಲ ಸವಾಲೊಡ್ಡುವ ವಿಶ್ವಾಸದಿಂದಿದೆ.
ಅರ್ಹತಾ ಹಂತದ ಈ ಹಿಂದಿನ ಪಂದ್ಯಗಳಲ್ಲಿ ಗುವಾಮ್ ವಿರುದ್ಧ 6-0 ಗೋಲುಗಳಿಂದ ವಿಜೃಂಭಿಸಿರುವ ಇರಾನ್, ಟರ್ಕ್ ಮೇನಿಸ್ತಾನ ವಿರುದ್ಧದ ಪಂದ್ಯವನ್ನು 1-1 ಗೋಲಿನಿಂದ ಡ್ರಾ ಮಾಡಿಕೊಂಡಿದೆ. ಹೀಗಾಗಿ ಇರಾನ್ ತಂಡ ಭಾರತದ ವಿರುದ್ಧವೂ ಸುಲಭ ಗೆಲುವು ಸಾಧಿಸುವ ಆತ್ಮವಿಶ್ವಾಸದಲ್ಲಿದೆ. ಇನ್ನು ಸುನೀಲ್ ಛೆಟ್ರಿ ಸಾರಥ್ಯದ ಭಾರತ ತಂಡ ಗುಂಪಿನಲ್ಲಿ ಉತ್ತಮ ಸ್ಥಾನವನ್ನೇನೂ ಕಾಯ್ದುಕೊಂಡಿಲ್ಲ. ಮೊದಲ ಹಂತದಲ್ಲಿ ಗುವಾಮ್ ವಿರುದ್ಧ 1-2 ಗೋಲುಗಳಿಂದ ಸೋಲನುಭವಿಸಿದ ಭಾರತ ತಂಡ, ಆನಂತರದ ಓಮನ್ ವಿರುದ್ಧದ ಪಂದ್ಯದಲ್ಲಿಯೂ 1-2 ಗೋಲುಗಳಿಂದ ಮಣಿದಿತ್ತು. ಇನ್ನು ಇತ್ತೀಚೆಗಷ್ಟೇ ನಡೆದ ನೇಪಾಳ ವಿರುದ್ಧದ ಪಂದ್ಯ (0-0) ಗೋಲುರಹಿತ ಆಟದೊಂದಿಗೆ ಡ್ರಾ ಕಂಡಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಇರಾನ್ ವಿರುದ್ಧದ ಈ ಮೂರು ಮುಖಾಮುಖಿಗಳಲ್ಲಿ ಭಾರತ ಒಮ್ಮೆಯೂ ಗೆಲುವು ಸಾಧಿಸಿಲ್ಲ ಎಂಬುದು ಇರಾನ್ ಆಟಗಾರರ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ.
ಆದರೆ ತವರಿನಲ್ಲಿ ನಡೆಯುತ್ತಿರುವ ಪಂದ್ಯವು ಭಾರತ ತಂಡದಲ್ಲಿ ಹೊಸ ಹುರುಪು ನೀಡಿದೆ. ಇರಾನ್ ಬಲಿಷ್ಠ ತಂಡವಾಗಿದ್ದರೂ, ನಾವು ಅದಕ್ಕೆ ಪ್ರಬಲ ಪೈಪೋಟಿ ನೀಡಲಿದ್ದೇವೆ. ನೇಪಾಳ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸಲು ವಿಫಲವಾದರೂ, ಅಲ್ಲಿ ಎಸಗಿದ ಕೆಲ ಪ್ರಮಾದಗಳು ಈ ಪಂದ್ಯದಲ್ಲಿ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ'' ಎಂದು ಭಾರತ ತಂಡದ ಗೋಲ್ ಕೀಪರ್ ಸುಬ್ರತಾ ಪಾಲ್ ಹೇಳಿದ್ದಾರೆ. ಒಂದೊಮ್ಮೆ ಮಂಗಳವಾರ ನಡೆಯಲಿರುವ ದ್ಯದಲ್ಲಿ ಭಾರತ ಸೋಲನುಭವಿಸಿದ್ದೇ ಆದರೆ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ಮುಂದಿನ ಹಂತಕ್ಕೆ ಪ್ರವೇಶಿಸುವುದು ದುಸ್ತರವಾಗಲಿದ್ದು, ಹೆಚ್ಚು ಕಮ್ಮಿ ಭಾರತದ ಹೋರಾಟಕ್ಕೆ ತೆರೆಬೀಳಲಿದೆ.
ಪಂದ್ಯ ಆರಂಭ ರಾತ್ರಿ 7ಕ್ಕೆ ನೇರ ಪ್ರಸಾರ: ಸೋನಿ ಸಿಕ್ಸ್
ಮಳೆ ಭೀತಿ
ಭಾರತ ಹಾಗೂ ಇರಾನ್ ನಡುವಣದ ಪಂದ್ಯಕ್ಕೆ ಮಳೆರಾಯನ ಭೀತಿ ಆವರಿಸಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯು ಮಂಗಳವಾರದ ಪಂದ್ಯಕ್ಕೆ ಭಾರೀ ಬೆದರಿಕೆ ಒಡ್ಡಿದೆ. ಆದಾಗ್ಯೂ ಮೈದಾನದಲ್ಲಿ ನೀರು ನಿಲ್ಲದ ಹೊರತು ಪಂದ್ಯ ನಡೆಯುವುದು ಅಬಾಧಿತವಾಗಿದೆ. ಸ್ಥಳೀಯ ಅಭಿಮಾನಿಗಳು ಸೇರಿದಂತೆ ಇರಾನ್ ನಿಂದಲೇ ವಿಪುಲ ಸಂಖ್ಯೆಯ ಅಭಿಮಾನಿಗಳು ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ತವಕಿಸುತ್ತಿದ್ದು, ಮಳೆ ಬಾರದಂತೆ ಮೊರೆ ಹೊತ್ತಿದ್ದಾರೆ.