ಲಾಸ್ ವೇಗಾಸ್: ಶತಮಾನದ ಬಾಕ್ಸಿಂಗ್ ಪಂದ್ಯ ಗೆದ್ದು ವಿಶ್ವ ವಿಖ್ಯಾತಿ ಗಳಿಸಿದ್ದ ಬಾಕ್ಸಿಂಗ್ ಕಲಿ ಅಮೆರಿಕದ ಖ್ಯಾತ ಬಾಕ್ಸಿಂಗ್ ಕಲಿ ಫ್ಲಾಯ್ಡ್ ಮೆವದರ್ ತಮ್ಮ ವೃತ್ತಿ ಜೀವನದ ಅಂತಿಮ ಬಾಕ್ಸಿಂಗ್ ಪಂದ್ಯದಲ್ಲಿಯೂ ಗೆಲುವು ಸಾಧಿಸುವ ಮೂಲಕ ತಾವು ಸೋಲಿಲ್ಲದ ಸರದಾರ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಫ್ಲಾಯ್ಡ್ ಮೆವದರ್ ಅವರ ವೃತ್ತಿ ಜೀವನದ ಅಂತಿಮ ಪಂದ್ಯವೆಂದೇ ಸಾಕಷ್ಟು ಪ್ರಚಾರ ಪಡೆದಿದ್ದ ಪಂದ್ಯದಲ್ಲಿ ಅರ್ಹವಾಗಿಯೇ ಫ್ಲಾಯ್ಡ್ ಮೆವದರ್ ಜಯಶಾಲಿಯಾಗಿದ್ದಾರೆ. ಆ ಮೂಲಕ ತಾವು ಬಾಕ್ಸಿಂಗ್ ನಲ್ಲಿ ಸೋಲಿಲ್ಲದ ಸರದಾರರಾಗಿ ಮುಂದುವರೆದಿದ್ದಾರೆ. ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲದೊಂದಿಗೆ ಲಾಸ್ ವೇಗಾಸ್ ನಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ಲಾಯ್ಡ್ ಮೆವದರ್ 120-108 ಅಂಕಗಳ ಅಂತರದೊಂದಿಗೆ ಆ್ಯಂಡ್ರೋ ಬರ್ಟೋ ಅವರನ್ನು ಮಣಿಸಿದ್ದಾರೆ. ಅಲ್ಲದೆ ತಮ್ಮ WBC (World Boxing Council) ಮತ್ತು WBA (World Boxing Association) ಚಾಂಪಿಯನ್ ಶಿಪ್ ಅನ್ನು ಮರಳಿ ಪಡೆದಿದ್ದಾರೆ.
12 ಸುತ್ತಿನಲ್ಲಿ ನಡೆದ ಪಂದ್ಯದಲ್ಲಿ ಪ್ರತೀ ಸುತ್ತಿನಲ್ಲಿಯೂ ಮೆವದರ್ ಮುನ್ನಡೆ ಸಾಧಿಸಿದರು. ಎದುರಾಳಿ ಆಟಗಾರ ಆ್ಯಂಡ್ರೋ ಬರ್ಟೋ ಅವರಿಗೆ ಯಾವುದೇ ಹಂತದಲ್ಲಿ ಮುನ್ನಡೆ ಪಡೆಯಲು ಅನುವು ಮಾಡಿಕೊಡದ ಹಾಲಿ ಚಾಂಪಿಯನ್ ಅಂತಿಮವಾಗಿ ಅವರನ್ನು 120-108 ಅಂಕಗಳ ಅಂತರದೊಂದಿಗೆ ಮಣಿಸಿದರು. ಆ ಮೂಲಕ ತಮ್ಮ 48-0 ಚಾಂಪಿಯನ್ ಶಿಪ್ ದಾಖಲೆಯನ್ನು 49-0ಕ್ಕೆ ಏರಿಸಿಕೊಳ್ಳುವ ಮೂಲಕ ಸೋಲಿಲ್ಲದ ಸರದಾರ ಎಂಬ ಖ್ಯಾತಿಯೊಂದಿಗೇ ಅಂತಾರಾಷ್ಟ್ರೀಯ ಬಾಕ್ಸಿಂಗ್ ಗೆ ವಿದಾಯ ಹೇಳಿದರು.
ಇಂತಹುದೇ ದಾಖಲೆಯನ್ನು ಈ ಹಿಂದೆ ರಾಕಿ ರಾಕಿ ಮಾರ್ಸಿಯಾನೊ ಅವರು ಕೂಡ ನಿರ್ಮಿಸಿದ್ದರು. ರಾಕಿ ಮಾರ್ಸಿಯಾನೊ ಅವರು ಕೂಡ ಅಮೆರಿಕದವರಾಗಿದ್ದು, ಒಟ್ಟು 49 ಚಾಂಪಿಯನ್ ಷಿಪ್ ಗಳಲ್ಲಿ ಪಾಲ್ಗೊಂಡು ಎಲ್ಲ 49 ಚಾಂಪಿಯನ್ ಷಿಪ್ ಗಳನ್ನು ತಮ್ಮದಾಗಿಸಿಕೊಂಡಿದ್ದರು. ತಮ್ಮ 45ನೇ ವಯಸ್ಸಿನಲ್ಲಿ 1969 ಆಗಸ್ಟ್ 31ರಂದು ನಡೆದ ವಿಮಾನ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದರು. ವಿಷಾಧನೀಯ ಸಂಗತಿ ಎಂದರೆ ಮರುದಿನವೇ ಅವರ ಜನ್ಮ ದಿನವಾಗಿತ್ತು. ಅವರು ಹುಟ್ಟಿದ್ದು ಸೆಪ್ಟೆಂಬರ್ 1 1923ರಂದು.