ಮೈಸೂರು: ಇನಿಂಗ್ಸ್ ನ ಅಂತಿಮ ಹಂತದಲ್ಲಿ ನಾಯಕ ಬಾಲಚಂದ್ರ ಅಖಿಲ್ (ಅಜೇಯ 69 ರನ್, 22 ಎಸೆತ, 6 ಬೌಂಡರಿ, 6 ಸಿಕ್ಸರ್) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಬಿಜಾಪುರ ಬುಲ್ಸ್ ಭರ್ಜರಿ ಜಯ ಗಳಿಸಿದೆ.
ಭಾನುವಾರ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡ 97 ರನ್‍ಗಳ ಅಂತರದಲ್ಲಿ ರಾಕ್‍ಸ್ಟಾರ್ಸ್ ವಿರುದ್ಧ ಗೆಲವು ದಾಖಲಿಸಿತು. ಟಾಸ್ ಗೆದ್ದ ರಾಕ್ ಸ್ಟಾರ್ಸ್ ತಂಡ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಬ್ಯಾಟಿಂ ಗ್ ಮಾಡಿದ ಬಿಜಾಪುರ ಬುಲ್ಸ್ ತಂಡ 20 ಓವರ್‍ಗಳಲ್ಲಿ 5 ವಿಕೆಟ್‍ಗೆ 197 ರನ್ ದಾಖಲಿಸಿತು. ನಂತರ ರಾಕ್‍ಸ್ಟಾರ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್‍ಗೆ 100 ದಾಖಲಿಸಲಷ್ಟೇ ಶಕ್ತವಾಯಿತು.
ಅಬ್ಬರಿಸಿದ ಅಖಿಲ್: ಮೊದಲು ಬ್ಯಾಟಿಂಗ್ ಮಾಡಲಿಳಿದ ಬಿಜಾಪುರ ಬುಲ್ಸ್ ತಂಡಕ್ಕೆ ಆರಂಭಿಕರಾದ ಆರ್.ಸಮರ್ಥ್ (17) ಮತ್ತು ನಿಧೇಶ್ (57 ರನ್, 45 ಎಸೆತ, 4 ಬೌಂಡರಿ, 2 ಸಿಕ್ಸರ್) ಸಾಧಾರಣ ಆರಂಭ ನೀಡಿದರು. ನಾಯಕ ಬಿ ಅಖಿಲ್ ಮಿಂಚಿನ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡಕ್ಕೆ ನೆರವಾದರು. ರಾಕ್‍ಸ್ಟಾರ್ಸ್ ಬೌಲಿಂಗ್ ದಾಳಿಯನ್ನು ಮನಬಂದಂತೆ ದಂಡಿಸಿದ ಅಖಿಲ್, ತಂಡವನ್ನು 200ರ ಗಡಿ ಸಮೀಪಕ್ಕೆ ಕೊಂಡೊಯ್ದರು.
ತತ್ತರಿಸಿದ ರಾಕ್‍ಸ್ಟಾರ್ಸ್: ಕಠಿಣ ಗುರಿಯನ್ನು ಬೆನ್ನಟ್ಟಿದ ರಾಕ್ ಸ್ಟಾರ್ಸ್ ತಂಡ ಬುಲ್ಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿಲ್ಲ. ಆರಂಭಿಕ ರಾಜು ಗೌಡ (26), ಮಧ್ಯಮ ಕ್ರಮಾಂಕದಲ್ಲಿ ಚಂದ್ರಶೇಖರ್ ರಘು (13) ಹಾಗೂ ಕಳೆ ಕ್ರಮಾಂಕದಲ್ಲಿ ಚರಣ್ ತೇಜಾ (24) ಎರಡಂಕಿ ರನ್ ದಾಖಲಿಸಲು ಮಾತ್ರ ಯಶಸ್ವಿಯಾದರು.
ಸಂಕ್ಷಿಪ್ತ ಸ್ಕೋರ್: ಬಿಜಾಪುರ ಬುಲ್ಸ್ 20 ಓವರ್‍ಗಳಲ್ಲಿ 5 ವಿಕೆಟ್ ಗೆ 197 (ಅಖಿಲ್ ಅಜೇಯ 69, ನಿಧೇಶ್ 57, ಚಂದ್ರಶೇಖರ್ ರಘು 23ಕ್ಕೆ 2) ರಾಕ್‍ಸ್ಟಾರ್ಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 100 (ರಾಜು ಗೌಡ 26, ಚರಣ್ ತೇಜಾ 24, ಕಾರ್ಯಪ್ಪ 8ಕ್ಕೆ 2) ಪಂದ್ಯಶ್ರೇಷ್ಠ: ಬಿ. ಅಖಿಲ್