ನ್ಯೂಯಾರ್ಕ್: ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲಬೇಕೆಂಬ ಕನಸಿನ ಬೆನ್ನತ್ತಿ ಸುಮಾರು ಹನ್ನೆರಡು ವರ್ಷಗಳ ನಿರಂತರ ಪ್ರಯತ್ನದ ನಂತರ, ತಮ್ಮ ಚೊಚ್ಚಲ ಪ್ರತಿಷ್ಠಿತ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿಯೊಂದಿಗೆ ಇಟಲಿಯ ಟೆನಿಸ್ ಆಟಗಾರ್ತಿ ಫ್ಲಾವಿಯಾ ಪೆನೆಟ್ಟಾ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.
ಭಾನುವಾರ ಆರ್ಥರ್ ಆ್ಯಶ್ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಫ್ಲಾವಿಯಾ ಪೆನೆಟ್ಟಾ, ತಮ್ಮ ದೇಶದ ಪ್ರತಿಸ್ಪರ್ಧಿ ರಾಬರ್ಟಾ ವಿನ್ಸಿ ವಿರುದ್ಧ 7-6 (7-4), 6-2 ನೇರ ಸೆಟ್‍ಗಳ ಜಯ ಸಂಪಾದಿಸಿದರು. ಆ ಮೂಲಕ ಟೂರ್ನಿಯ ಆರಂಭದಲ್ಲಿ ತವರಿನ ಅಂಗಣದಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಟೆನಿಸ್ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆಯಲಿದ್ದಾರೆ ಎಂಬ ಕುತೂಹಲದಲ್ಲಿದ್ದ ಅಭಿಮಾನಿಗಳಿಗೆ ಸಂಪೂರ್ಣ ಭಿನ್ನವಾದ ಫತಾಂಶ ಸಿಕ್ಕಿದೆ.
33 ವರ್ಷದ ಪೆನೆಟ್ಟಾ ಮೊದಲ ಬಾರಿಗೆ ಗ್ರಾಂಡ್‍ಸ್ಲಾಮ್ ಪ್ರಶಸ್ತಿ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಚೊಚ್ಚಲ ಗ್ರಾಂಡ್‍ಸ್ಲಾಮ್ ಪ್ರಶಸ್ತಿ ಗೆದ್ದ ಹಿರಿಯ ಆಟಗಾರ್ತಿ ಎಂಬ ಖ್ಯಾತಿ ಗಳಿಸಿದ್ದಾರೆ. ಈ ಹಿಂದೆ ಪೆನೆಟ್ಟಾ 2011ರ ಆಸ್ಟ್ರೇಲಿಯಾ ಓಪನ್ ಟೂರ್ನಿಯ ಮಹಿಳೆಯರ ಡಬಲ್ಸ್‍ನಲ್ಲಿ ತಮ್ಮ ಜತೆಗಾರ್ತಿ ಅರ್ಜೆಂಟೀನಾದ ಗಿಸೆಲಾ ಡುಲ್ಕೊ ಜತೆಗೂಡಿ ಪ್ರಶಸ್ತಿ ಗೆದ್ದುಕೊಂಡಿದ್ದರು.