ನವದೆಹಲಿ: ವಿಷ್ಣುವಿನ ಅವತಾರದಲ್ಲಿ ಜಾಹೀರಾತು ನೀಡಿ ವಿವಾದಕ್ಕೊಳಗಾಗಿದ್ದ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಸೋಮವಾರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ವಿಧಿಸಿದೆ.
ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಧೋನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣದ ವಿಚಾರಣೆಗೆ ತಡೆ ನೀಡಿದೆ. ಅಲ್ಲದೆ ಈ ಸಂಬಂಧ ಧೋನಿ ವಿರುದ್ಧ ದೂರು ದಾಖಲಿಸಿದ್ದ ಸಾಮಾಜಿಕ ಕಾರ್ಯಕರ್ತ ಜಯರಾಮ್ ಹಿರೇಮಠ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಅಕ್ಟೋಬರ್ 1ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ದೂರು ದಾರನಿಗೆ ಸೂಚಿಸಿ, ವಿಚಾರಣೆಯನ್ನು ಅಕ್ಟೋಬರ್ 1ಕ್ಕೆ ಮುಂದೂಡಿದೆ.
2013ರ ಏಪ್ರಿಲ್‍ರಲ್ಲಿ ಬಿಸಿನೆಸ್ ಟುಡೆ ಮ್ಯಾಗಜಿನ್ ಧೋನಿ ವಿಷ್ಣುವಿನ ವೇಷದಲ್ಲಿರುವ ವಿವಾದಾತ್ಮಕ ಫೋಟೊವನ್ನು ದಿ ಗಾಡ್ ಆಫ್ ಬಿಗ್ ಡೀಲ್ಸ್ ತಲೆ ಬರಹದೊಂದಿಗೆ ಪ್ರಕಟಿಸಿತ್ತು. ನಂತರ ಈ ವಿಷಯ ಕರ್ನಾಟಕ ಹೈಕೋರ್ಟ್ ಮೇಟ್ಟಿಲೇರಿತ್ತು. ಈ ಫೋಟೊ ಪ್ರಕಟಣೆಯಿಂದ ಹಿಂದೂಧರ್ಮದ ಜನರ ಭಾವನೆಗೆ ಧಕ್ಕೆಯಾಗಿದೆ ಎಂಬ ಆರೋಪದ ಮೇಲೆ ಧೋನಿ ಹಾಗೂ ಮ್ಯಾಗಜಿನ್ ಮುದ್ರಕ ಹಾಗೂ ಸಂಪಾದಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಸೂಚಿಸಿತ್ತು. ಹಾಗಾಗಿ ಧೋನಿ ಈ ಕುರಿತ ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.