ಸಾನಿಯಾ ಮಿರ್ಜಾ, ರೋಹನ್ ಬೋಪಣ್ಣ
ನವದೆಹಲಿ: ಸದ್ಯದಲ್ಲೇ ಆರಂಭಗೊಳ್ಳಲಿರುವ ಡೇವಿಸ್ ಕಪ್ ವಿಶ್ವ ಗ್ರೂಪ್ ಪ್ಲೇ-ಆಫ್ ಪಂದ್ಯಾವಳಿಯಲ್ಲಿ, ಹಾಲಿ ನಂಬರ್ ಒನ್ ತಂಡವಾದ ಜೆಕ್ ಗಣರಾಜ್ಯದ ವಿರುದ್ಧ ಭಾರತ ಗೆಲುವು ಸಾಧಿಸುವ ಮೂಲಕ ಮತ್ತೆ ವಿಶ್ವ ಗುಂಪಿಗೆ ಅರ್ಹತೆ ಪಡೆಯುತ್ತದೆ ಎಂಬ ವಿಶ್ವಾಸವನ್ನು ಭಾರತದ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ದೆಹಲಿ ಲಾನ್ ಟೆನಿಸ್ ಅಸೋಸಿಯೇಷನ್‍ನಲ್ಲಿ ಸೆ. 18ರಿಂದ ಶುರುವಾಗಲಿರುವ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿರುವ ಬೋಪಣ್ಣ ಮಂಗಳವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ವಿಶ್ವ ಟೆನಿಸ್‍ನಲ್ಲಿ ಟಾಪ್ 100ರಲ್ಲಿ ಕಾಣಿಸಿಕೊಂಡಿರುವ ಇಬ್ಬರು ಆಟಗಾರರನ್ನು ಜೆಕ್ ತಂಡ ಒಳಗೊಂಡಿದೆ. ಆದರೆ, ಶ್ರೇಯಾಂಕ ಇಲ್ಲಿ ಮುಖ್ಯವಾಗುವುದಿಲ್ಲ. ತವರಿನಲ್ಲಿ ನಾವು ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಪ್ರವಾಸಿಗರನ್ನು ಮಣಿಸಿ ವಿಶ್ವ ಗ್ರೂಪ್‍ಗೆ ಮರಳುವ ವಿಶ್ವಾಸವಿದೆ ಎಂದು ಬೋಪಣ್ಣ ಪುನರುಚ್ಚರಿಸಿದರು.
ನಿರ್ಧಾರ ಸಾನಿಯಾಗೆ ಬಿಟ್ಟದ್ದು
ಈ ಮಧ್ಯೆ ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕೂಟದಲ್ಲಿ ಹಿರಿಯ ಟೆನಿಸಿಗ ಲಿಯಾಂಡರ್ ಪೇಸ್ ಜತೆಗೆ ಆಡಬೇಕೋ ಇಲ್ಲವೇ ರೋಹನ್ ಬೋಪಣ್ಣ ಜತೆಗೆ ಆಡಬೇಕೋ ಎಂಬುದನ್ನು ಸ್ವತಃ ಸಾನಿಯಾ ನಿರ್ಧರಿಸಲಿದ್ದಾರೆ ಎಂದು ಬೋಪಣ್ಣ ತಿಳಿಸಿದ್ದಾರೆ.
'ಪ್ರಸಕ್ತ ವಿಶ್ವದ ನಂ.1 ಆಟಗಾರ್ತಿಯಾಗಿರುವ ಸಾನಿಯಾ ಜತೆಗೆ ನಾನು ಆಡಲು ಬಯಸುತ್ತೇನೆ. ಇದೇ ವೇಳೆ ಪೇಸ್ ಕೂಡ ಅವರೊಟ್ಟಿಗೆ ಆಡಲು ಇಚ್ಛಿಸುತ್ತಾರೆ. ಹೀಗಾಗಿ ನಮ್ಮಿಬ್ಬರ ಪೈಕಿ ಯಾರು ಅವರೊಂದಿಗೆ ಆಡುತ್ತಾರೆ ಎಂಬುದು ಸಾನಿಯಾ ಅವರ ನಿರ್ಧಾರವನ್ನು ಅವಲಂಬಿಸಿದೆ'' ಎಂದು ದೆಹಲಿಯಲ್ಲಿ ರೋಹನ್ ಬೋಪಣ್ಣ ಮಾಧ್ಯಮದವರಿಗೆ ತಿಳಿಸಿದ್ದಾರೆ. ಅಂದಹಾಗೆ ಕಳೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಪೇಸ್ ಹಾಗೂ ಸಾನಿಯಾ ಜೋಡಿ ಜತೆಯಾಗಿ ಆಡಿದ್ದರಾದರೂ, ಕ್ವಾರ್ಟರ್ ಫೈನಲ್‍ನಲ್ಲಿ ಸೋಲನುಭವಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics