ಕ್ರೀಡೆ

ದಾಲ್ಮಿಯಾಗೆ ಭಾವಪೂರ್ಣ ವಿದಾಯ

Mainashree

ಕೋಲ್ಕತಾ: ಭಾನುವಾರ ಸಂಜೆ ತೀವ್ರ ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದ ದಕ್ಷ ಕ್ರಿಕೆಟ್ ಆಡಳಿತಾಧಿಕಾರಿ ಜಗಮೋಹನ್ ದಾಲ್ಮಿಯಾ ಅವರಿಗೆ ಸೋಮವಾರ ಭಾವಪೂರ್ವ ವಿದಾಯ ಸಲ್ಲಿಸಲಾಯಿತು.

ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸನ್, ಎನ್‍ಸಿಪಿ ಮುಖಂಡ ಹಾಗೂ ಬಿಸಿಸಿಐ, ಐಸಿಸಿ ಮಾಜಿ ಅಧ್ಯಕ್ಷ ಶರದ್ ಪವಾರ್ ಸೇರಿದಂತೆ ಕ್ರಿಕೆಟ್ ವಲಯ ಅಗಲಿದ ನಾಯಕನಿಗೆ ಕೊನೇ ನಮನ ಸಲ್ಲಿಸಿದರು. ಸೋಮವಾರ ಮಧ್ಯಾಹ್ನ 12.15ಕ್ಕೆ ಅವರ ನಿವಾಸ 10 ಆಲಿಪೊರ್‍ನಿಂದ ದಾಲ್ಮಿಯಾ ಪಾರ್ಥಿವ ಶರೀರವನ್ನು ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಯಿತು.

ಅಂತಿಮವಾಗಿ ಮಧ್ಯಾಹ್ನ 3 ಗಂಟೆ ಸಮಯಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ 10 ಕೋಲ್ಕತಾ ಪೊಲೀಸ್ ಅಧಿಕಾರಿಗಳು ಮೂರು ಸುತ್ತಿನ ಗುಂಡು ಹಾರಿಸಿ ಸಕಲ ರಾಜ್ಯ ಸರ್ಕಾರಿ ಗೌರವ ಅರ್ಪಿಸಿದರು. ಸಂಜೆ 4 ಗಂಟೆಗೆ ಪುತ್ರ ಅಭಿಷೇಕ್ ವಿಧಿ ವಿಧಾನದಂತೆ ಪಾರ್ಧಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.

ಭಾರತ ಕ್ರಿಕೆಟ್ ತಂಡದ ನಿರ್ದೇಶಕ ರವಿಶಾಸ್ತ್ರಿ, ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹಾಗೂ ಸಿಎಒ ರತ್ನಾಕರ್ ಶೆಟ್ಟಿ, ಬಿಸಿಸಿಐ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಅಲ್ಲದೆ, ಮಾಜಿ ನಾಯಕ ಸೌರವ್ ಗಂಗೂಲಿ ಹಾಗೂ ಬಿಸಿಸಿಐನ ಇತರೆ ಅಧಿಕಾರಿಗಳು ಹಾಗೂ ಗಣ್ಯರು ಅಗಲಿದ ಮಹಾನ್ ಆಡಳಿತಾಧಿಕಾರಿಯ ಅಂತಿಮ ದರ್ಶನ ಪಡೆದರು.

ಭಾನುವಾರ ಸಂಜೆ ಕೋಲ್ಕತಾದ ಬಿ.ಎಂ. ಬಿರ್ಲಾ ಹೃದಯ ಸಂಶೋಧನಾ ಕೇಂದ್ರದಲ್ಲಿ ಕೊನೆಯುಸಿರೆಳೆದ 75 ವರ್ಷದ ದಾಲ್ಮಿಯಾ ಪತ್ನಿ ಚಂದ್ರಲೇಖ, ಪುತ್ರಿ ವೈಶಾಲಿ ಹಾಗೂ ಪುತ್ರ ಅಭಿಷೇಕ್ ಅವರನ್ನು ಅಗಲಿದ್ದಾರೆ.

SCROLL FOR NEXT