ನವದೆಹಲಿ: ಬೀಜಿಂಗ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಭಾರತದ ಅಭಿನವ್ ಬಿಂದ್ರಾ, 8ನೇ ಏಷ್ಯನ್ ಏರ್‌ಗನ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ವೈಯಕ್ತಿಕ ಹಾಗೂ ತಂಡದ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.
ಇಲ್ಲಿನ ಡಾ.ಕಾರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ಭಾನುವಾರ ನಡೆದ 10.ಮೀ. ಪುರುಷರ ವೈಯಕ್ತಿಕ ಸುತ್ತಿನ ಏರ್ ರೈಫಲ್ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಬಿಂದ್ರಾ, 208.3 ಅಂಕ ಗಳಿಸುವ ಮೂಲಕ ಚಿನ್ನದ ಗೌರವಕ್ಕೆ ಅವರು ಭಾಜನರಾದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಶ್ವದ 8ನೇ ಶ್ರೇಯಾಂಕಿತ ಕಜಕಿಸ್ತಾನದ ಮುರ್ಕೋವ್ ಯುಯೂರಿ(206.6) ಬೆಳ್ಳಿ ಗೌರವ ಪಡೆದರೆ, ಕೊರಿಯಾದ ಯು ಚೇಚುಲ್(185.3) ಕಂಚಿನ ಪದಕಕ್ಕೆ ಪಾತ್ರರಾದರು.
ಭಾರತದ ಮತ್ತೊಬ್ಬ ಸ್ಪರ್ಧಿ ಗಗನ್ ನಾರಂಗ್ ಈ ವಿಭಾಗದಲ್ಲಿ 4ನೇ ಸ್ಥಾನ(164.5) ಗಳಿಸಿದರೆ, ಚೈನ್ ಸಿಂಗ್ 122.7 ಅಂಕ ಗಳಿಸಿ ಏಳನೇ ಸ್ಥಾನ ಗಳಿಸಿದರು.
ತಂಡದ ವಿಭಾಗದಲ್ಲೂ ಚಿನ್ನ: ಇನ್ನು 10. ಮೀ. ಏರ್ ರೈಫಲ್ ತಂಡದ ವಿಭಾಗದ ಸ್ಪರ್ಧೆಯಲ್ಲೂ ಅಭಿನವ್ ಬಿಂದ್ರಾ, ಗಗನ್ ನಾರಂಗ್ ಹಾಗೂ ಚೈನ್ ಸಿಂಗ್ ಅವರುಳ್ಳ ಭಾರತ ತಂಡ ಚಿನ್ನದ ಗೌರವಕ್ಕೆ ಪಾತ್ರವಾಯಿತು. ಒಟ್ಟು 1868.8 ಅಂಕ ಗಳಿಸಿದ ಭಾರತ ತಂಡ, ಮೊದಲ ಸ್ಥಾನ ಅಲಂಕರಿಸಿದರೆ, ಕಿಮ್ ಡಜಿನ್, ಯು ಚೆಚುಲ್ ಅವರುಳ್ಳ ಕೊರಿಯಾ ತಂಡ(1859.1) ದ್ವಿತೀಯ ಸ್ಥಾನ ಹಾಗೂ ಮುಬಾರಕ್ ಮೆಸ್ಫರ್ ಅಲ್ಪಾವ್ಸಾರಿ(1824.8) ಅವರುಳ್ಳ ಸೌದಿ ಅರೇಬಿಯಾ ತಂಡ ತೃತೀಯ ಸ್ಥಾನ ಅಲಂಕರಿಸಿತು.